

ಬೀಜಿಂಗ್: ಮುತ್ತು, ಚುಂಬನ ಮತ್ತು ಪಪ್ಪಿ ಮುಂತಾದ ಹೆಸರಿನಿಂದ ಕರೆಯುವ ಮುತ್ತು ಪ್ರೇಮ ಸಂಬಂಧಗಳ ಬೆಸುಗೆ ಮಾತ್ರವಲ್ಲದೆ, ಪರಸ್ಪರ ಕಾಳಜಿ, ಅನ್ಯೋನ್ಯತೆ, ಆರೈಕೆ, ಆಪ್ತತೆ, ರಕ್ಷಣೆ ಹಾಗೂ ಭರವಸೆಯ ಸೂಚಕವಾಗಿದೆ. ಪ್ರೇಮಿಗಳ ನಡುವೆ ಪ್ರೀತಿಯ ಭಾವನೆ ವ್ಯಕ್ತಪಡಿಸಲು ಈ ಮುತ್ತು ಪ್ರಮುಖ ಅಂಶವಾಗಿದೆ. ಚುಂಬನದಿಂದ ಅನೇಕ ಆರೋಗ್ಯದ ಲಾಭಗಳೂ ಇವೆ ಎನ್ನುತ್ತಾರೆ ಸಂಶೋಧಕರು. ಆದರೆ, ಮುತ್ತಿನ ಗಮ್ಮತ್ತು ಅಳತೆ ಮೀರಿದರೆ ಆಪತ್ತು ಕೂಡ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.
ಚೀನಾದ ವ್ಯಕ್ತಿಯೊಬ್ಬ ತನ್ನ ಗರ್ಲ್ಫ್ರೆಂಡ್ ಜತೆ 10 ನಿಮಿಷಗಳ ಕಾಲ ದೀರ್ಘ ಚುಂಬನ ಮಾಡಲು ಹೋಗಿ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಆ. 22ರಂದು ಯುವಜೋಡಿ ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದ ಪಶ್ಚಿಮ ಕೆರೆಯ ದಡದಲ್ಲಿ ಡೇಟ್ ಮಾಡುತ್ತಿದ್ದರು. ಈ ವೇಳೆ ಯುವಜೋಡಿ ಕಿಸ್ ಮಾಡುತ್ತಿರಬೇಕಾದರೆ, ಯುವಕನ ಕಿವಿಯಲ್ಲಿ ಇದ್ದಕ್ಕಿದ್ದಂತೆ ತೀವ್ರ ನೋವು ಕಾಣಿಸಿಕೊಂಡಿದೆ. ತಕ್ಷಣ ಆತ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವೇಳೆ ಆತನನ್ನು ಪರೀಕ್ಷಿಸಿದ ವೈದ್ಯರು, ಕಿವಿಯ ತಮಟೆ ಹರಿದಿದೆ ಎಂದು ಹೇಳಿದ್ದಾರೆ. ಆತನಿಗೆ ವೈದ್ಯರು ಆ್ಯಂಟಿ ಬಯೋಟಿಕ್ ನೀಡಿದ್ದು, ಸಂಪೂರ್ಣ ಗುಣಮುಖನಾಗಲು ಎರಡು ತಿಂಗಳ ಸುದೀರ್ಘ ವಿಶ್ರಾಂತಿ ಬೇಕಿದೆ ಎಂದು ಸಲಹೆ ನೀಡಿದ್ದಾರೆ.
ದೀರ್ಘ ಚುಂಬನ ಮಾಡುವಾಗ ಭಾವೋದ್ರೇಕಕ್ಕೆ ಒಳಗಾದಂತಹ ಸಂದರ್ಭದಲ್ಲಿ ಕಿವಿಯ ಒಳಗಿನ ಗಾಳಿಯ ಒತ್ತಡದಲ್ಲಿ ತ್ವರಿತ ಬದಲಾವಣೆಗೆ ಕಾರಣವಾಗಬಹುದು. ಈ ರೀತಿಯ ಚುಂಬನದ ವೇಳೆ ಭಾರೀ ಉಸಿರಾಟದಿಂದಾಗಿ ಕಿವಿಯೊಳಗೆ ಅಸಮತೋಲನ ಉಂಟಾಗಿ ಕಿವಿಯ ತಮಟೆ ಪಂಕ್ಚರ್ ಆಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ರೀತಿಯ ಘಟನೆ ಇದೇ ಮೊದಲೇನಲ್ಲ. 2008ರಲ್ಲಿ ದಕ್ಷಿಣ ಚೀನಾದ ಯುವತಿಯೊಬ್ಬಳು ಭಾಗಶಃ ತನ್ನ ಶ್ರವಣ ಶಕ್ತಿಯನ್ನೇ ಕಳೆಕೊಂದಿದ್ದಳು. ಪ್ರಿಯಕರನ ಜತೆ ದೀರ್ಘವಾಗಿ ಚುಂಬಿಸುವ ವೇಳೆ ಭಾವೋದ್ರೇಕಕ್ಕೆ ಒಳಗಾಗಿ ಯುವತಿ ತನ್ನ ಕಿವಿಯನ್ನು ಕಳೆದುಕೊಂಡಿದ್ದಳು. ಎಡ ಭಾಗದ ಕಿವಿ ಸಂಪೂರ್ಣ ಕೇಳುತ್ತಿರಲಿಲ್ಲ. ಇದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಿದ್ದಳು.
ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು ಡೌಯಿನ್ ಅಲೋನ್ ಹೆಸರಿನ ಚೀನಾದ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಹಂಚಿಕೊಂಡಾಗ 1 ಮಿಲಿಯನ್ಗೂ ಅಧಿಕ ಮಂದಿ ಸುದ್ದಿಯನ್ನು ಲೈಕ್ಸ್ ಮಾಡಿದ್ದರು ಮತ್ತು 4 ಲಕ್ಷಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದರು ಎಂದು ಸೌಥ್ ಮಾರ್ನಿಂಗ್ ಚೀನಾ ಪೋಸ್ಟ್ ವರದಿ ಮಾಡಿದೆ. (ಏಜೆನ್ಸೀಸ್)