ಕೊರೊನಾ ವೈರಸ್​ ಮೊದಲು ಪತ್ತೆ ಹಚ್ಚಿ ಬಂಧನವಾಗಿದ್ದ ಚೀನಾ ವೈದ್ಯ ವೈರಸ್​ನಿಂದಲೇ ಮೃತ

Doctor
Published on

ವುಹಾನ್​: ಚೀನಾದಲ್ಲಿ ಜನರನ್ನು ಬಲಿ ಪಡೆಯುತ್ತಿರುವ ಮಾರಕ ಕೊರೊನಾ ವೈರಸ್ ಅನ್ನು ಮೊದಲು ಪತ್ತೆಹಚ್ಚಿ ತಮ್ಮ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಪೊಲೀಸರಿಂದ ಬಂಧಿಯಾಗಿದ್ದ ಚೀನಾದ ವೈದ್ಯರೊಬ್ಬರು ಇದೀಗ ವೈರಸ್​ನಿಂದಲೇ ಸಾವಿಗೀಡಾಗಿರುವುದಾಗಿ ಗುರುವಾರ ವರದಿಯಾಗಿದೆ. ​

ಲಿ ವೆನ್​ಲಿಯಾಂಗ್​ ಮೃತ ವೈದ್ಯ. ವುಹಾನ್​ನಲ್ಲಿ ಸಾರ್ಸ್​ ರೀತಿಯ ರೋಗ ಹರಡುತ್ತಿರುವ ಶಂಕೆ ವ್ಯಕ್ತಪಡಿಸಿ ವೆನ್​ಲಿಯಾಂಗ್​ ಮಾಹಿತಿ ಶೇರ್​ ಮಾಡಿಕೊಂಡಿದ್ದ. ಆದರೆ, ಕೊರೊನಾ ವೈರಸ್​ ಸೋಂಕಿನಿಂದಲೇ ಗುರುವಾರ ಸಾವಿಗೀಡಾಗಿದ್ದಾರೆ ಎಂದು ಚೀನಾ ಸರ್ಕಾರಿ ಆಸ್ಪತ್ರೆ ವರದಿ ಮಾಡಿದೆ.

34 ವರ್ಷದ ವೆನ್​ಲಿಯಾಂಗ್​ ಓರ್ವ ನೇತ್ರಶಾಸ್ತ್ರಜ್ಞ. ವುಹಾನ್​ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್​ 30ರಲ್ಲಿ ತನ್ನ ಸ್ನೇಹಿತನಿಗೆ ಖಾಸಗಿ ಸಂದೇಶದ ಮೂಲಕ ಜಿಲ್ಲೆಯಾದ್ಯಂತ ಸೋಂಕು ಹರಡುತ್ತಿರುವುದಾಗಿ ತಿಳಿಸಿದ್ದರು.

ಚೀನಾದ ಕೇಂದ್ರ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್​ನಲ್ಲಿ ಮೊದಲ ಬಾರಿಗೆ ವೈರಸ್​ ಸೋಂಕು ಕಾಣಿಸಿಕೊಂಡಾಗ ವೆನ್​ಲಿಯಾಂಗ್ ಮೊದಲು ವರದಿ ನೀಡಿದ್ದರು. ಕಳೆದ ವರ್ಷ ಡಿಸೆಂಬರ್​​ನಲ್ಲೇ ವರದಿಯನ್ನು ನೀಡಿದ್ದರು. ಚೀನಾದ ಮೆಸೆಜಿಂಗ್​ ಆ್ಯಪ್​ ವೀಚ್ಯಾಟ್​ ಮೂಲಕವು ಇತರೆ ವೈದ್ಯರಿಗೂ ಮಾಹಿತಿಯನ್ನು ತಿಳಿಸಿದ್ದರು.

ತನ್ನ ಆಸ್ಪತ್ರೆಯಲ್ಲಿ 7 ರೋಗಿಗಳು ದಾಖಲಾಗಿದ್ದಾರೆ. ಅವರಿಗೆ ಸಾರ್ಸ್​​ ರೀತಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ದಾಖಲಾಗಿರುವ ಏಳು ರೋಗಿಯೂ ಹುಬೈನಲ್ಲಿನ ಒಂದೇ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಪ್ರಾಣಿ ಮಾಂಸವನ್ನು ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.

ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಕೊರೊನಾ ವೈರಸ್​ ಎಂಬುದು ತಿಳಿದಿದ್ದಾಗಿ ವೆನ್​ಲಿಯಾಂಗ್​ ವಿವರಿಸಿದ್ದಾರೆ. 2003ರಲ್ಲಿ ಚೀನಾ ಹಾಗೂ ವಿಶ್ವದ್ಯಾಂತ 800 ಜನರ ಸಾವಿಗೆ ಕಾರಣವಾಗಿದ್ದ ತೀವ್ರ ಉಸಿರಾಟದ ರೋಗದ ವೈರಸ್​​ ​(SARS-ಸಿವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್) ಒಳಗೊಂಡಂತೆ ಬಹುದೊಡ್ಡ ವೈರಸ್​ ಕುಟುಂಬವನ್ನು ಪರೀಕ್ಷೆಯಲ್ಲಿ ವೆನ್​ಲಿಯಾಂಗ್​ ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ.

ವೆನ್​ಲಿಯಾಂಗ್​ ಅವರು ಮುಂಜಾಗ್ರತ ಕ್ರಮವಾಗಿ ತನ್ನ ಸ್ನೇಹಿತನಿಗೆ ಆತನ ಪ್ರೀತಿ ಪಾತ್ರರಾದವರನ್ನು ಕಾಪಾಡಿಕೊಳ್ಳಲು ಸಂದೇಶವನ್ನು ಕಳುಹಿಸಿದ್ದರು. ಆದರೆ, ರೋಗದ ಬಗ್ಗೆ ವೆನ್​ಲಿಯಾಂಗ್​ ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಅದು ಕಾಡ್ಗಿಚ್ಚಿನಂತೆ ಚೀನಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಾದ ಬಳಿಕ ವೆನ್​ಲಿಯಾಂಗ್​ ವಾದವನ್ನು ಚೀನಾ ಸರ್ಕಾರ ತಳ್ಳಿ ಹಾಕಿ, ಅವರನ್ನು ಬಂಧಿಸಿದ್ದರು. ಇದೀಗ ಅದೇ ವೈರಸ್​ನಿಂದಲೇ ವೆನ್​ಲಿಯಾಂಗ್​ ಸಾವಿಗೀಡಾಗಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net