

ನವದೆಹಲಿ: ಟಿಕ್ಟಾಕ್ ಸೇರಿ ಚೀನಾದ 59 ಮೊಬೈಲ್ ಆಪ್ಸ್ ನಿಷೇಧಿಸಿದ್ದರಿಂದ, ಇವನ್ನು ಬಳಸುತ್ತಿದ್ದ ಮೊಬೈಲ್ ಬಳಕೆದಾರರು ಪರ್ಯಾಯ ಆಪ್ ಕಂಡುಕೊಳ್ಳುವುದು ಅನಿವಾರ್ಯ. ಗ್ರಾಮಾಂತರ, ಪಟ್ಟಣವಾಸಿ ಭಾರತೀಯರಲ್ಲಿ ಜನಪ್ರಿಯತೆ ಗಳಿಸಿದ್ದ ಟಿಕ್ಟಾಕ್, ಹಲೋಗೆ ಇಲ್ಲಿ ಅತಿ ದೊಡ್ಡ ಮಾರುಕಟ್ಟೆ ನಿರ್ವಣವಾಗಿತ್ತು. ಸೋಮವಾರ ಕೇಂದ್ರ ತೆಗೆದುಕೊಂಡ ಕಠಿಣ ಕ್ರಮ ಈ ಆಪ್ ಕಂಪನಿಗಳಿಗೆ ಬರಸಿಡಿಲಿನಂತಾಗಿದ್ದರೂ, ಕಾಲ್ಕೆರೆದು ಜಗಳಕ್ಕೆ ಬರುವ ಚೀನಾಕ್ಕೆ ಬುದ್ಧಿ ಕಲಿಸಬೇಕೆಂಬ ಭಾರತದ ಉದ್ದೇಶ ತಳ್ಳಿಹಾಕುವಂತಿಲ್ಲ. ತಂತ್ರಜ್ಞರು, ಐಟಿ ಉದ್ಯಮಿಗಳು ಹೇಳುವಂತೆ ಚೀನೀ ಆಪ್ಗಳ ಮೇಲಿನ ನಿಷೇಧ ದೇಶೀ ಆಪ್ಗಳ ತಯಾರಿಕೆಗೆ ವೇದಿಕೆ ಒದಗಿಸಿದ್ದಂತೂ ಹೌದು.
ನಿಷೇಧ ಜಾರಿ ಹೇಗೆ?
ಕೇಂದ್ರ ಸರ್ಕಾರದ ಆದೇಶದ ಅನುಸಾರ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಗಳು (ಐಎಸ್ಪಿ) ಈ ಆಪ್ಗಳನ್ನು ಬ್ಲಾಕ್ ಮಾಡಬೇಕು. ಈಗಾಗಲೆ ಬ್ಲಾಕ್ ಆಗಿದ್ದಲ್ಲಿ, ಆಪ್ ಬಳಕೆಯನ್ನು ಸರ್ಕಾರದ ಆದೇಶದ ಮೇರೆಗೆ ಬ್ಲಾಕ್ ಮಾಡಲಾಗಿದೆ ಎಂಬ ಸಂದೇಶ ಮೊಬೈಲ್ನ ಪ್ಲೇ ಸ್ಟೋರ್ನಲ್ಲಿ ಕಾಣಿಸಲಿದೆ. ಅಕ್ರಮ ಮಾರ್ಗದಲ್ಲಿ ಆಪ್ ಡೌನ್ಲೋಡ್ ಮಾಡಿ ಅದನ್ನು ಬಳಸುವ ಸಾಧ್ಯತೆಯಿದ್ದರೂ, ಕೇಂದ್ರ ಸರ್ಕಾರ ರಹಸ್ಯ ಮಾರ್ಗಗಳ ಮೂಲಕವೋ ಅಥವಾ ಐಟಿ ವಿಭಾಗದ ಮೂಲಕವೋ ಮಾಹಿತಿ ಸಂಪಾದಿಸಿ ಅವುಗಳನ್ನು ಮತ್ತೆ ಬ್ಲಾಕ್ ಮಾಡಬಹುದು.
ಭಾರತವೇ ದೊಡ್ಡ ಮಾರ್ಕೆಟ್ ಏಕೆ?
ದೂರಸಂಪರ್ಕ ಕ್ರಾಂತಿ ಹಾಗೂ ಆಂಡ್ರಾಯ್್ಡ ಮೊಬೈಲ್ ಬಳಕೆದಾರರ ಸಂಖ್ಯೆ ವ್ಯಾಪಕವಾಗಿ ಏರಿದ್ದರಿಂದ ಭಾರತದಲ್ಲಿ ಇಂಟರ್ನೆಟ್ ಬೆಲೆ ಕಡಿಮೆಯಾಗುತ್ತಾ ಬಂತು. ಬೇರೆ ದೇಶಗಳಿಗೆ ಹೋಲಿಸಿದರೆ ಈಗ ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ ಲಭ್ಯವಿದೆ. ಹೀಗಾಗಿ, ಜನರು ಎಗ್ಗಿಲ್ಲದೆ ಇಂಟರ್ನೆಟ್ ಬಳಸುತ್ತಾರೆ ಮತ್ತು ಮೊಬೈಲ್ನಲ್ಲೇ ಹೆಚ್ಚು ಮಗ್ನರಾಗಿರುತ್ತಾರೆ! 2012-2018ರ ಮಧ್ಯೆ ಭಾರತೀಯರು ಆನ್ಲೈನ್ ವಿಡಿಯೋಗಳನ್ನು ನೋಡುವ ಸಮಯ ದಿನಕ್ಕೆ ಸರಾಸರಿ 2 ನಿಮಿಷದಿಂದ 50 ನಿಮಿಷಕ್ಕೆ ಏರಿದೆ ಎಂದು ಝೆನಿತ್ ಮೀಡಿಯಾ ಏಜೆನ್ಸಿ ಹೇಳುತ್ತದೆ. ಗೂಗಲ್ ಒಡೆತನದ ಯೂಟ್ಯೂಬ್ಗೆ ಭಾರತದಲ್ಲಿ ಟಿಕ್ಟಾಕ್ಗಿಂತ ಹೆಚ್ಚು ಬಳಕೆದಾರರು ಇದ್ದರೂ, ಒಟ್ಟಾರೆ ಪ್ರಭಾವ ಹಾಗೂ ಜನರನ್ನು ಸೆಳೆಯುವ ಹೆಚ್ಚು ಸಾಮರ್ಥ್ಯವಿರುವುದು ಟಿಕ್ಟಾಕ್ಗೆ ಎಂಬ ಅಭಿಪ್ರಾಯವಿದೆ. ಟಿಕ್ಟಾಕ್ ಅಪ್ಲಿಕೇಷನ್ನ ಆದಾಯ-ಲಾಭಗಳಲ್ಲಿ ಭಾರತದ ಪಾಲು, ಚೀನಾ ಮತ್ತು ಅಮೆರಿಕಕ್ಕಿಂತ ಕಡಿಮೆ. ಆದರೆ, ಟಿಕ್ಟಾಕ್ನ ಜಾಗತಿಕ ಡೌನ್ಲೋಡ್ ಸರಾಸರಿ ತೆಗೆದುಕೊಂಡರೆ, ಶೇ.30 ಡೌನ್ಲೋಡ್ ಭಾರತದಲ್ಲೇ ಆಗಿದೆ.
ಆಪ್ ಟಾರ್ಗೆಟ್ ಮಾಡಿದ್ದೇಕೆ?
ಚೀನಾದಿಂದ ಆಮದಾಗುವ ಸರಕುಗಳ ಮೇಲೆ ನಿಷೇಧ ಹೇರಿದರೆ, ಚೀನಾಕ್ಕಿಂತ ಭಾರತಕ್ಕೇ ಹೆಚ್ಚು ನಷ್ಟವಾಗುವ ಸಾಧ್ಯತೆಯಿದೆ ಎನ್ನುವುದು ವಾಣಿಜ್ಯ ತಜ್ಞರ ವಾದ. ಇದು ಭಾರತದ ಆರ್ಥಿಕತೆ ಮತ್ತು ಉದ್ಯಮಗಳ ಮೇಲೆ ಪರಿಣಾಮ ಬೀರುವ ಅಪಾಯವಿತ್ತು. ಅದಲ್ಲದೆ ಈ ವಿಚಾರಗಳನ್ನು ಚೀನಾ ವಿಶ್ವ ವಾಣಿಜ್ಯ ಕೇಂದ್ರಕ್ಕೆ ಕೊಂಡೊಯ್ದು ಮತ್ತೊಂದು ವಿವಾದ ಸೃಷ್ಟಿಸಬಹುದು. ಹೀಗಾಗಿಯೇ, ತಂತ್ರಜ್ಞಾನದ ದಾಳಿಯೇ ಹೆಚ್ಚು ಪರಿಣಾಮಕಾರಿ ಕ್ರಮ ಎಂಬ ತಜ್ಞರ ಅಭಿಪ್ರಾಯ ಆಧರಿಸಿಯೇ ಆಪ್ಗಳನ್ನು ನಿಷೇಧಿಸಲು ತೀರ್ವನಿಸಲಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ನಿಷೇಧ ಶಾಶ್ವತವೇ?
ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಕೆಲ ದಿನಗಳ ಕಾಲ ಟಿಕ್ಟಾಕ್ನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು. ನಂತರ, ನಿಷೇಧ ಹಿಂತೆಗೆದುಕೊಳ್ಳಲಾಯ್ತು. ಈ ಬಾರಿ ಕೇಂದ್ರ ಸರ್ಕಾರ ಗೌಪ್ಯತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾರಣ ನೀಡಿ 59 ಆಪ್ಗಳನ್ನು ನಿಷೇಧಿಸಿದೆ. ಚೀನಾ ಗಡಿ ತಂಟೆ ಜೋರಾಗಿರುವುದರಿಂದ, ಅಲ್ಲಿನ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದೇ ಭಾರತ ಸರ್ಕಾರ ಆರ್ಥಿಕ ಹೊಡೆತ ನೀಡಲು ಮುಂದಾಗಿದೆ. ಒಂದುವೇಳೆ, ಮುಂದಿನ ದಿನಗಳಲ್ಲಿ ಚೀನಾ ‘ಸರಿಹಾದಿ’ಗೆ ಬಂದಲ್ಲಿ, ಆಪ್ಗಳ ಮೇಲಿನ ನಿಷೇಧವನ್ನು ಭಾರತ ಹಿಂಪಡೆದುಕೊಂಡರೂ ಅಚ್ಚರಿ ಇಲ್ಲ. ಆದರೆ, ಭಾರತದ ಕ್ರಮ ಜಾಗತಿಕವಾಗಿ ಮುಜುಗರ ಉಂಟು ಮಾಡಿರುವುದರಿಂದ ತಕ್ಷಣಕ್ಕೆ ಚೀನಾ ತಲೆಬಗ್ಗಿಸಿ ನಡೆದೀತು ಎಂದು ಹೇಳುವುದು ಕಷ್ಟ. ಹಾಗಿದ್ದರೂ, ತಮ್ಮ ಅಭಿಪ್ರಾಯಗಳನ್ನು ಮುಂದಿಡಲು 48 ಗಂಟೆಗಳ ಅವಕಾಶ ನೀಡಲಾಗಿರುವುದರಿಂದ ಆಪ್ ಕಂಪನಿಗಳು ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾಗುತ್ತವಾ ಎಂಬುದು ಸದ್ಯದ ಪ್ರಶ್ನೆ.
ಫೇವರಿಟ್ ಟಿಕ್ಟಾಕ್
ಭಾರತದಲ್ಲಿ 12 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಟಿಕ್ಟಾಕ್, ಇಲ್ಲಿ ಅಧಿಕ ಡೌನ್ಲೋಡ್ ಆಗಿದ್ದ ಆಪ್ ಕೂಡ ಹೌದು. ಕನ್ನಡ ಸೇರಿ ಒಟ್ಟು 14 ಭಾಷೆಗಳಲ್ಲಿರು ಇದು ಎಲ್ಲೆಡೆ ಹೊಸ ಮಾದರಿಯ ಯುವ ಸಂಸ್ಕೃತಿಯ ಆರಂಭಕ್ಕೆ ಪ್ರೇರಣೆ ಆಗಿತ್ತು. ಇದನ್ನು ಬೈಟ್ಡ್ಯಾನ್ಸ್ ಎಂಬ ಸಂಸ್ಥೆ ನಡೆಸುತ್ತಿದೆ. ಗ್ರಾಮಾಂತರ ಭಾಗದ ಹಲವಾರು ಯುವಕ/ಯುವತಿಯರು ಟಿಕ್ಟಾಕ್ನಿಂದಲೇ ಜನಪ್ರಿಯರಾಗಿದ್ದರು. ಸ್ಯಾನ್ಫ್ರಾನ್ಸಿಸ್ಕೋ ಮೂಲದ ಸೆನ್ಸಾರ್ಟವರ್ ಎಂಬ ಸಂಸ್ಥೆ ಮಾಹಿತಿ ಪ್ರಕಾರ, ಏಪ್ರಿಲ್ನಲ್ಲಿ ಟಿಕ್ಟಾಕ್ ವಿಶ್ವಾದ್ಯಂತ 2 ಬಿಲಿಯನ್ ಡೌನ್ಲೋಡ್ಗೆ ಸಾಕ್ಷಿಯಾಗಿತ್ತು.
ಸ್ವದೇಶಿ ತಂತ್ರಜ್ಞಾನಕ್ಕೆ ಅವಕಾಶ
ಚೀನೀ ಆಪ್ಗಳನ್ನು ನಿಷೇಧಿಸುವ ಕ್ರಮ ದೇಶದ ಸಾಫ್ಟ್ವೇರ್ ಡೆವಲಪರ್ಗಳಿಗೆ ಉತ್ತಮ ಅವಕಾಶ ತೆರೆದಿದೆ ಎನ್ನುವುದು ಅನೇಕ ಉದ್ಯಮಿಗಳ ಅಭಿಪ್ರಾಯ. ಬಯಾಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಕೂಡ ಕೇಂದ್ರದ ಕ್ರಮ ಸ್ವಾಗತಿಸಿದ್ದು, ತಂತ್ರಜ್ಞಾನ ಪ್ರೇರಿತ ಯುವಕರು ಇದನ್ನು ಕೇಂದ್ರ ಸರ್ಕಾರ ನೀಡಿರುವ ಉಡುಗೊರೆ ಎಂದು ಭಾವಿಸಬೇಕು ಎಂದಿದ್ದಾರೆ. ’ಚೀನಾಕ್ಕಿಂತಲೂ ಅದ್ಭುತ ಎನಿಸುವ ಆಪ್ಗಳನ್ನು ನಾವು ಸೃಷ್ಟಿಸಬಹುದು. ಚೀನಾ ಆಪ್ಗಳು ಇಲ್ಲದಿರುವುದರಿಂದ ಗ್ರಾಹಕರು ಸಹಜವಾಗಿಯೇ ಪರ್ಯಾಯ ಆಪ್ಗಳನ್ನು ಹುಡುಕುತ್ತಾರೆ. ಹೀಗಾಗಿ, ನಾವೇ ದೇಶೀ ಆಪ್ಗಳನ್ನು ಸಿದ್ಧಪಡಿಸಿ ಜನಪ್ರಿಯ ಮಾರುಕಟ್ಟೆ ಪ್ರವೇಶಿಸಬಹುದು’ ಎಂದವರು ಹೇಳಿದ್ದಾರೆ.
ನಿಷೇಧದ ಪರಿಣಾಮ?
ಇಂಗ್ಲಿಷ್ ಭಾಷೆ ಅರಿಯದ ನಗರ, ಪಟ್ಟಣ ಹಾಗೂ ಗ್ರಾಮವಾಸಿಗಳ ಮಧ್ಯೆ, ಹಲೋ, ಟಿಕ್ಟಾಕ್, ಲೈಕೀ, ಬಿಗಿ ಲೈವ್ನಂತಹ ವಿಡಿಯೋ ಚಾಟ್ ಆಪ್ಗಳು ಭಾರೀ ಜನಪ್ರಿಯತೆ ಗಳಿಸಿದ್ದವು. ಅಲ್ಲದೆ, ಈ ಆಪ್ಗಳು ಸಾವಿರಾರು ಮಂದಿಗೆ ಹಣ ಗಳಿಸುವ ವೇದಿಕೆಯೂ ಆಗಿದ್ದವು ಮತ್ತು ದೇಶದ ವಿವಿಧೆಡೆ ಆಪ್ಗಳ ಕಚೇರಿಗಳು ಆರಂಭಗೊಂಡು, ಸಾವಿರಾರು ಭಾರತೀಯರಿಗೆ ನೌಕರಿಯೂ ಸಿಕ್ಕಿತ್ತು.
ಗೌಪ್ಯ ಮಾಹಿತಿ ರವಾನೆ ಶಂಕೆ
ಚೀನಾ ಸರ್ಕಾರ ಕೆಲವು ಆಪ್ಗಳ ಮೂಲಕ ಅನ್ಯದೇಶಗಳ ಗೌಪ್ಯ, ಖಾಸಗಿ ಮಾಹಿತಿ ಸಂಗ್ರಹ ಮಾಡುತ್ತಿದೆ ಎಂಬ ಬಗ್ಗೆ ಅನೇಕ ದೂರುಗಳು ಇವೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆ ಕೂಡ ಹೇಳಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓ ಬ್ರೇನ್ ಇದೇ ಕಳವಳ ವ್ಯಕ್ತಪಡಿಸಿದ್ದಲ್ಲದೆ, ಚೀನಾದ ಕಮ್ಯುನಿಸ್ಟ್ ಪಾರ್ಟಿ ಮೊಬೈಲ್ಫೋನ್ ಕಂಪನಿಗಳನ್ನೇ ಅಸ್ತ್ರಗಳನ್ನಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದರು. ಅಪ್ಲಿಕೇಶನ್ ಅಥವಾ ಮೊಬೈಲ್ಫೋನ್ಗಳ ಬಳಕೆಗೆ ನಮ್ಮಿಂದಲೇ ಸಮ್ಮತಿಯನ್ನೇ ಪಡೆದು, ನಮ್ಮ ಬಗೆಗಿನ ಎಲ್ಲಾ ಡೇಟಾಗಳನ್ನು ಪಡೆದುಕೊಳ್ಳಲಾಗುತ್ತದೆ. ಇದೊಂದು ರೀತಿಯ ಮೈಕ್ರೋ ಟಾರ್ಗೆಟಿಂಗ್’ ಎಂದು ಅವರು ಹೇಳಿದ್ದರು.
| ರಾಘವ ಶರ್ಮ ನಿಡ್ಲೆ