ಪೆಟ್ಟು ತಿಂದರೂ ಸುಮ್ಮನಾಗದ ಚೀನಾ, ಉತ್ತರಾಖಂಡ, ಹಿಮಾಚಲಕ್ಕೂ ವ್ಯಾಪಿಸಿದ ಡ್ರ್ಯಾಗನ್ ಕಬಂಧಬಾಹು

pangong tso
Published on

ನವದೆಹಲಿ: ಗಲ್ವಾನ್​ ಕಣಿವೆಯ ರಕ್ತಸಿಕ್ತ ಘರ್ಷಣೆಯಲ್ಲಿ ಸಾಕಷ್ಟು ಹಾನಿ ಅನುಭವಿಸಿರುವುದಲ್ಲದೆ, ಜಾಗತಿಕವಾಗಿ ಏಕಾಂಗಿಯಾಗುವ ಭೀತಿ ಇದ್ದರೂ ಚೀನಾ ಸುಮ್ಮನಾಗುತ್ತಿಲ್ಲ. ಲಡಾಖ್​ ಪೂರ್ವಭಾಗದ ನಾಲ್ಕು ಕಡೆಗಳಲ್ಲಿ ಸೇನೆಯನ್ನು ನಿಯೋಜಿಸಿರುವ ಅದು, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ಹೊಂದಿಕೊಂಡ ಗಡಿಗಳಲ್ಲೂ ತನ್ನ ಸೇನೆಯನ್ನು ನಿಯೋಜಿಸಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೀಢೀರ್​ ಲೇಹ್​ ಭೇಟಿಯ ನಂತರದಲ್ಲಿ ಈ ವಿದ್ಯಮಾನ ಕಂಡು ಬಂದಿದೆ.

ಲೇಹ್​ನ ಮುಂಚೂಣಿ ನೆಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದಿಢೀರ್​ ಭೇಟಿ ನೀಡಿದ್ದರು. ಅಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾಪಡೆ, ವಾಯುಪಡೆ ಮತ್ತು ಐಟಿಬಿಪಿ ಯೋಧರೊಂದಿಗೆ ಮಾತುಕತೆ ನಡೆಸಿ, ಧೈರ್ಯ, ಸಾಹಸ ಮತ್ತು ಶೌರ್ಯವನ್ನು ಕೊಂಡಾಡಿದ್ದರು. ಇದು ಚೀನಾಕ್ಕೆ ಇರಿಸುಮುರಿಸು ಉಂಟು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಖಾತೆ ವಕ್ತಾರರು, ಚೀನಾವನ್ನು ಕೆರಳಿಸುವಂತ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಭಾರತವನ್ನು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಈಗ ಡ್ರ್ಯಾಗನ್​ ತನ್ನ ಕಬಂಧಬಾಹುವನ್ನು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದತ್ತ ಚಾಚುವ ದುಸ್ಸಾಹಸ ತೋರಿದೆ.

ಪ್ರಧಾನಿ ಲೇಹ್​ ಭೇಟಿಯ ಮಹತ್ವ: ಲಡಾಖ್​ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಲೆಫ್ಟಿನೆಂಟ್​ ಜನರಲ್​ ಮಟ್ಟದ ಸಭೆ ನಡೆದಿತ್ತು. ಈ ಸಭೆಯಲ್ಲಿ ಚೀನಾದವರು ವಾಸ್ತವ ಗಡಿರೇಖೆಯ ಗಸ್ತು ಪಾಯಿಂಟ್​ 14, 15 ಮತ್ತು 17ರಿಂದ ಹಿಂದೆ ಸರಿಯಲು ಒಪ್ಪಿಕೊಂಡಿದ್ದರು. ಈ ಗಸ್ತು ಪಾಯಿಂಟ್​ಗಳು ಗಲ್ವಾನ್​ ಕಣವೆಯಿಂದ ಹಾಟ್​ ಸ್ಪ್ರಿಂಗ್​ ಪ್ರದೇಶದವರೆಗೂ ಹಬ್ಬಿಕೊಂಡಿವೆ. ಭಾರತ ಹೇಳುವ ವಾಸ್ತವ ಗಡಿರೇಖೆಯಿಂದ ಅಂದಾಜು 500 ಮೀಟರ್​ ದೂರದವರೆಗೆ ಹಿಂದೆ ಸರಿಯುವುದಾಗಿ ಹೇಳಿತ್ತು.

ಆದರೆ ಈಗ ಪ್ಯಾಂಗಾಂಗ್​ ತ್ಸೊ ಪ್ರದೇಶದಿಂದ ಹಿಂದೆ ಸರಿಯಲು ಚೀನಾ ನಿರಾಕರಿಸುತ್ತಿದೆ. ಈ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಯೋಧರು ಉಪಗ್ರಹಗಳ ಕಣ್ಣಿಗೂ ಕಾಣುವಷ್ಟು ದೊಡ್ಡದಾಗಿ ಮ್ಯಾಂಡರಿನ್​ ಭಾಷೆಯ ಚೀನಾದ ಲಾಂಛನವನ್ನು ಬರೆದಿರುವುದು ಕಂಡುಬಂದಿತ್ತು. ಈ ಲಾಂಛನವು ಫಿಂಗರ್​ 4 ಮತ್ತು ಫಿಂಗರ್​ 5 ಅಲ್ಲದೆ, ಭಾರತದ ಕಲ್ಪನೆಯ ವಾಸ್ತವ ಗಡಿರೇಖೆಯ ಪ್ರದೇಶಗಳನ್ನು ಒಳಗೊಂಡಿರುವುದಾಗಿ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಚೀನಾ ಒತ್ತಡ ಹೇರುತ್ತಿರುವಂತೆ ಪೂರ್ವ ಲಡಾಖ್​ನಲ್ಲಿ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡಬಾರದು ಎಂಬುದು ಭಾರತದ ನಿಲುವಾಗಿದೆ. ಭಾರತದ ಈ ಮನೋಭಾವ ಮತ್ತು ವಾದಕ್ಕೆ ಹೆಚ್ಚಿನ ಪುಷ್ಟಿ ಒದಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಲೇಹ್​ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಅಲ್ಲದೆ, ಮಿಲಿಟರಿ ಮಟ್ಟದ ಮಾತುಕತೆಯಲ್ಲೂ ಬಿಕ್ಕಟ್ಟಿನ ಕಗ್ಗಂಟು ಮತ್ತಷ್ಟು ಜಟಿಲಗೊಳ್ಳುವ ಲಕ್ಷಣ ಕಂಡು ಬಂದಿದೆ. ಈ ಪರಿಸ್ಥಿತಿಯ ನಿವಾರಣೆಯ ಮೇಲೂ ಪ್ರಧಾನಿ ಭೇಟಿ ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net