

ವುಹಾನ್: ಚೀನಾದಲ್ಲಿ ಕೊರೊನಾ ವೈರಸ್ ಮನುಷ್ಯರ ಪ್ರಾಣ ತೆಗೆಯಲಾರಂಭಿಸಿ ಮೂರು ತಿಂಗಳಾದ ನಂತರ ಅಲ್ಲಿನ ಸರ್ಕಾರ ವನ್ಯಜೀವಿಗಳ ಬೇಟೆ, ಮಾರಾಟ ಮತ್ತು ಸೇವನೆಗೆ ಬ್ರೇಕ್ ಹಾಕಿದೆ.
ವನ್ಯಜೀವಿಗಳ ಸೇವೆನಯಿಂದಲೇ ಕೊರೊನಾ ವೈರಸ್ ಬಂದಿದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷಿಗಳಿಲ್ಲ. ಆದರೆ ಹಾವು, ಬಾವುಲಿಗಳಂತಹ ವನ್ಯಜೀವಿಗಳನ್ನು ಮಾರುವಂತಹ ಮಾರ್ಕೆಟ್ನ ಜನರಲ್ಲೇ ಹೆಚ್ಚಾಗಿ ವೈರಸ್ ಕಂಡು ಬಂದಿದ್ದರಿಂದಾಗಿ, ಕಾಡು ಪ್ರಾಣಿಗಳೇ ಈ ವೈರಸ್ಗೆ ಕಾರಣ ಎಂದು ಊಹಿಸಲಾಗಿತ್ತು. ಅದೇ ಕಾರಣದಿಂದಾಗಿ ಸರ್ಕಾರ ಈ ತುರ್ತು ನಿರ್ಧಾರವನ್ನು ತೆಗೆದುಕೊಂಡಿದೆ.
ದೇಶದಲ್ಲಿ ಯಮರೂಪಿಯಾಗಿ ಕಾಡುತ್ತಿರುವ ಕೊರೊನಾವನ್ನು ನಿಯಂತ್ರಣಕ್ಕೆ ತರಲು ಈ ನಿರ್ಧಾರ ಅನಿವಾರ್ಯ ಎಂದು ಅಲ್ಲಿನ ಸರ್ಕಾರವು ತಿಳಿಸಿದೆ. ಒಂದು ವೇಳೆ ಯಾರಾದರೂ ಬೇಟೆಯಾಡುವುದನ್ನು ಕಂಡರೆ ಅಥವಾ ಮಾರುವುದನ್ನು ಕಂಡರೆ ಅವರಿಗೆ ಶಿಕ್ಷೆ ನೀಡುವುದಾಗಿ ತಿಳಿಸಲಾಗಿದೆ. ಈ ಹಿಂದೆ ಜನವರಿ ತಿಂಗಳಿನಲ್ಲಿ ದೇಶದ ಜನರಿಗೆ ವನ್ಯಜೀವಿಗಳ ಸೇವನೆ ಮಾಡದಿರುವಂತೆ ತಿಳಿಸಲಾಗಿತ್ತು. ಆದರೆ ಇದೀಗ ಅಧಿಕೃತವಾಗಿ ಬ್ರೇಕ್ ನೀಡಲಾಗಿದೆ. (ಏಜೆನ್ಸೀಸ್)