

ಬೀಜಿಂಗ್: ಅರುಣಾಚಲಪ್ರದೇಶದ ಗಡಿಗೆ ಸಮೀಪದ ಟಿಬೆಟ್ನಲ್ಲಿ ಬ್ರಹ್ಮಪುತ್ರ ನದಿಗೆ ಚೀನಾ ಬೃಹತ್ ಅಣೆಕಟ್ಟು ನಿರ್ವಿುಸುತ್ತಿದ್ದು, ಜುಲೈ 20ರಂದು ನಿರ್ಮಾಣ ಆರಂಭವಾಗಿದೆ. ಬ್ರಹ್ಮಪುತ್ರ ನದಿ ಪ್ರದೇಶದಲ್ಲಿ ಚೀನಾದ ಪ್ರಧಾನಿ ಲಿ ಕಿಯಾಂಗ್ ಶನಿವಾರ ಶಂಕುಸ್ಥಾಪನೆ ನಡೆಸುವ ಮೂಲಕ ಈ ಬೃಹತ್ ಅಣೆಕಟ್ಟು ನಿರ್ವಣಕ್ಕೆ ಚಾಲನೆ ನೀಡಿದ್ದಾರೆ.
ಬ್ರಹ್ಮಪುತ್ರ ನದಿಗೆ ಚೀನಾದಲ್ಲಿ ಸ್ಥಳೀಯವಾಗಿ ಯಾರ್ಲುಂಗ್ ಜ್ಯಾಂಗ್ಬೊ ಎನ್ನಲಾಗುತ್ತಿದ್ದು, ಟಿಬೆಟ್ ಸ್ವಾಯತ್ತ ಪ್ರದೇಶದ ನ್ಯಿಂಗ್ಚಿ ಸಿಟಿಯ ಮೇನ್ಲಿಂಗ್ ಹೈಡ್ರೋಪವರ್ ಸ್ಟೇಷನ್ನಲ್ಲಿ ಗುದ್ದಲಿಪೂಜೆ ಕಾರ್ಯಕ್ರಮ ನಡೆಯಿತು. ಈ ಜಲವಿದ್ಯುತ್ ಯೋಜನೆಯು ಜಗತ್ತಿನ ಅತಿದೊಡ್ಡ ಮೂಲಸೌಕರ್ಯ ಯೋಜನೆಯಾಗಿದ್ದು, ಕೆಳ ನದಿಪಾತ್ರದ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ಈ ಯೋಜನೆಗೆ 1.2 ಟ್ರಿಲಿಯನ್ ಯುವಾನ್ (167.8 ಬಿಲಿಯನ್ ಡಾಲರ್) ಖರ್ಚು ಮಾಡಲಾಗುತ್ತದೆ. ಭಾರತೀಯ ಕರೆನ್ಸಿ ಪ್ರಕಾರ ಸುಮಾರು 14.46 ಲಕ್ಷ ಕೋಟಿ ರೂ. ಆಗಲಿದೆ. ಈ ಯೋಜನೆಗೆ ಕಳೆದ ಡಿಸೆಂಬರ್ನಲ್ಲಿ ಅನುಮೋದನೆ ನೀಡಲಾಗಿತ್ತು.
ಬ್ರಹ್ಮಪುತ್ರ ನದಿಯು ಅರುಣಾಚಲಪ್ರದೇಶದ ನಂತರ ಬಾಂಗ್ಲಾದೇಶಕ್ಕೆ ಹರಿಯುವ ಹಿಮಾಲಯ ಪ್ರದೇಶದ ದೊಡ್ಡ ಕಮರಿಯಲ್ಲಿ ದೊಡ್ಡ ಯೂ-ಟರ್ನ್ ತೆಗೆದುಕೊಳ್ಳುವಂಥ ಸ್ಥಳದಲ್ಲಿ ಈ ಅಣೆಕಟ್ಟು ನಿರ್ವಣವಾಗಲಿದೆ. ಈ ಯೋಜನೆಯ ಸ್ಥಳವು ಭೂಕಂಪಗಳು ಸಂಭವಿಸುವ ಟೆಕ್ಟೋನಿಕ್ ಪ್ಲೇಟ್ ಗಡಿಯಲ್ಲಿ ಇರುವುದರಿಂದ ಈ ಅಣೆಕಟ್ಟು ನಿರ್ವಣವು ಭಾರಿ ತಾಂತ್ರಿಕ ಸವಾಲುಗಳನ್ನು ಒಳಗೊಂಡಿದೆ.
ಪ್ರಸ್ತುತ ನಿರ್ವಣವಾಗುತ್ತಿರುವ ಅಣೆಕಟ್ಟು ಈಗಾಗಲೇ ವಿಶ್ವದ ಅತ್ಯಂತ ಬೃಹತ್ ಎನ್ನಲಾದ ಚೀನಾದ ಅಣೆಕಟ್ಟಿಗಿಂತಲೂ ದೊಡ್ಡದಾಗಿದೆ. ಈ ಅಣೆಕಟ್ಟು ನೀರಿನ ಹರಿವನ್ನು ನಿಯಂತ್ರಿಸಲು ಚೀನಾಗೆ ಅಧಿಕಾರ ನೀಡುತ್ತದೆ. ಮಾತ್ರವಲ್ಲದೆ, ಅದರ ಗಾತ್ರ ಮತ್ತು ಪ್ರಮಾಣವು ಬೀಜಿಂಗ್ ಯುದ್ಧದ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ ಎಂಬ ಕಾರಣದಿಂದಾಗಿ ಭಾರತದಲ್ಲಿ ಕಳವಳಗಳು ಹುಟ್ಟಿಕೊಂಡಿವೆ. ಟಿಬೆಟ್ನಲ್ಲೇ ಅತ್ಯಂತ ದೊಡ್ಡದು ಎನ್ನಲಾದ 1.5 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ವಣವಾದ ಝಾಮ್ ಹೈಡ್ರೋಪವರ್ ಸ್ಟೇಷನ್ 2015ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಅದು ಕೂಡ ಭಾರತಕ್ಕೆ ಕಳವಳಕಾರಿಯಾಗಿದೆ.