'ಮಸ್ಕ್' ಟೆಸ್ಲಾಗೆ ಚೀನಾ 'ಮಸ್ತ್' ಪೈಪೋಟಿ! ಹಾರುವ ಕಾರಿಗೆ ರೆಕ್ಕೆ ಕೊಟ್ಟ ಎಕ್ಸ್​ಪೆಂಗ್ ಸಂಸ್ಥೆ | Xpeng Flying Cars

Untitled design (21)
Published on

ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ನೇತೃತ್ವದ ಟೆಸ್ಲಾ ಸಂಸ್ಥೆಗೆ ಸಖತ್ ಪೈಪೋಟಿ ಕೊಡಲು ಸನ್ನದ್ಧವಾಗಿರುವ ಚೀನಾ, ಇದೀಗ ತಮ್ಮದೇ ಎಕ್ಸ್​ಪೆಂಗ್​ ಸಂಸ್ಥೆಯಿಂದ ತಯಾರಾದ ಹಾರುವ ಕಾರುಗಳ ( Xpeng Flying Cars) ಟ್ರಯಲ್​ ಅನ್ನು ಯಶಸ್ವಿಯಾಗಿ ನಡೆಸಿದೆ.

ಅಮೆರಿಕದ ದೈತ್ಯ ಟೆಸ್ಲಾವನ್ನು ಹಿಂದಿಕ್ಕಿರುವ ಚೀನೀ ಕಂಪನಿ, ಟೆಸ್ಲಾಗೂ ಮುನ್ನವೇ ಅಖಾಡಕ್ಕಿಳಿದಿರುವುದು ಸದ್ಯ ಅಮೆರಿಕನ್ನರ ಹುಬ್ಬೇರಿಸಿದೆ. ಈ ವಾರ, ಚೀನಾ ಕಂಪನಿಯು ಹಾರುವ ಕಾರುಗಳ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಈ ಕಾರುಗಳನ್ನು ಹೊಸ ಪೀಳಿಗೆಯ ಸಾರಿಗೆಯಾಗಿ ಪ್ರಚಾರ ಮಾಡಲಾಗುತ್ತಿದೆ. ಹಾಗಿದ್ದರೆ, ಟೆಸ್ಲಾದಂತಹ ಬೃಹತ್​ ಸಂಸ್ಥೆಗೆ ಟಕ್ಕರ್​ ಕೊಟ್ಟಿರುವ ಈ ಚೀನಾ ಕಂಪನಿ ಯಾವುದು? ಯಾವುದು ಈ ಹಾರುವ ಕಾರು? ಇದರ ವಿಶೇಷತೆಗಳೇನು? ಎಂಬ ಹತ್ತು ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಉತ್ಪಾದನೆ ಆರಂಭ...

ಸಂಸ್ಥೆಯ ತಯಾರಿಕ ಘಟಕ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌದಲ್ಲಿದೆ. ಚೀನಾದ ಮಾಧ್ಯಮ ವರದಿಗಳ ಪ್ರಕಾರ, ಸುಮಾರು 120,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ಘಟಕವು ಭೂ ವಿಮಾನ ವಾಹಕ ಎಂದು ಕರೆಯಲ್ಪಡುವ ತನ್ನ ಮಾಡ್ಯುಲರ್ ಹಾರುವ ಕಾರಿನ ಮೊದಲ ಹಂತವನ್ನು ಈಗಾಗಲೇ ಪೂರ್ಣಗೊಳಿಸಿದೆ. ಈ ಸ್ಥಾವರವು ವಾರ್ಷಿಕವಾಗಿ 10,000 ಹಾರುವ ವಿಮಾನ ಮಾಡ್ಯೂಲ್‌ಗಳನ್ನು ಉತ್ಪಾದಿಸಲು ಯೋಜಿಸಿದೆ. ಇದರ ಆರಂಭಿಕ ಸಾಮರ್ಥ್ಯ 5,000 ಘಟಕಗಳು ಎನ್ನಲಾಗಿದೆ.

ಮಸ್ಕ್​ಗೆ ಟಕ್ಕರ್​

ಒಂದಷ್ಟು ವರದಿಗಳ ಪ್ರಕಾರ, ಕಂಪನಿಯು ಹಾರುವ ಕಾರುಗಳ ಉತ್ಪಾದನೆಗೆ ವಿಶ್ವದ ಅತಿದೊಡ್ಡ ತಯಾರಿಕ ಘಟಕವಾಗಲಿದೆ. ಈ ಕಂಪನಿಯಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಒಂದು ಹಾರುವ ಕಾರನ್ನು ಉತ್ಪಾದಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮೊದಲು ಮಾತನಾಡಿದ್ದ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್, "ತಮ್ಮ ಸಂಸ್ಥೆಯ ಹಾರುವ ಕಾರು ತಮ್ಮ ವೃತ್ತಿಜೀವನದ ಅತ್ಯಂತ ಸ್ಮರಣೀಯ ಉತ್ಪನ್ನ ಎಂದಿದ್ದರು. ಮುಂಬರುವ ತಿಂಗಳುಗಳಲ್ಲಿ ಈ ಕಾರನ್ನು ಜನರಿಗೆ ಪರಿಚಯಿಸಲಿದ್ದೇವೆ. ಇದು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇದು ಅದ್ಭುತ ತಂತ್ರಜ್ಞಾನವನ್ನು ಹೊಂದಿದೆ" ಎಂದು ಮಸ್ಕ್ ಹೇಳಿದ್ದರು. ಆದರೆ, ಅವರಿಗಿಂತ ಮೊದಲೇ ಚೀನೀ ಕಂಪನಿ ಈ ಕೆಲಸಕ್ಕೆ ಮುಂದಾಗಿರುವುದು ಸದ್ಯ ಪೈಪೋಟಿಯ ಕಾವು ಬಲು ಜೋರಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net