

ಬೀಜಿಂಗ್: ಚೀನಾದಲ್ಲಿ ಸಾಲು ಸಾಲಾಗಿ ಜನರನ್ನು ಬಲಿ ಪಡೆದುಕೊಳ್ಳುತ್ತಿರುವ ಮಾರಕ ಕೊರೊನಾ ವೈರಸ್ ಅನ್ನು ಮೊದಲೇ ಪತ್ತೆ ಹಚ್ಚಿ, ಬಳಿಕ ಬಂಧನಕ್ಕೊಳಗಾಗಿ ಅದೇ ವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗಿರುವ ವೈದ್ಯನ ಸಾವಿನ ತನಿಖೆಗೆ ಚೀನಾದ ಆ್ಯಂಟಿ ಗ್ರಾಫ್ಟ್ ವಾಚ್ಡಾಗ್ ಶುಕ್ರವಾರ ಆದೇಶಿಸಿದೆ.
ವೈದ್ಯನ ಸಾವು ಚೀನಾದ್ಯಂತ ಕಿಡಿ ಹೊತ್ತಿಸಿದ್ದು, ಕೊರೊನಾ ವೈರಸ್ ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸದ ಚೀನಾ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವೈದ್ಯನ ಸಾವಿನ ತನಿಖೆಗೆ ಆದೇಶಿಸಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಚೀನಾದ ಶಿಸ್ತು ಪರಿಶೀಲನಾ ಆಯೋಗ, ಒಂದು ತಂಡವು ವೈರಸ್ ಪೀಡಿತ ಹಾಗೂ ವೈದ್ಯ ಸಾವಿಗೀಡಾದ ವುಹಾನ್ ನಗರಕ್ಕೆ ತನಿಖೆಗಾಗಿ ತೆರಳಲಿದೆ ಎಂದು ತಿಳಿಸಿದೆ.
ಅಂದಹಾಗೆ ವೈದ್ಯ ಲಿ ವೆನ್ಲಿಯಾಂಗ್(34) ವುಹಾನ್ ನಗರದ ಕೇಂದ್ರೀಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಗುರುವಾರ ವೈರಸ್ ಸೋಕಿನಿಂದಲೇ ಸಾವಿಗೀಡಾಗಿದ್ದಾರೆ ಎಂದು ಎಲ್ಲೆಡೆ ವರದಿಯಾಗಿತ್ತು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಏಕೆಂದರೆ ಕೊರೊನಾ ವೈರಸ್ ಅನ್ನು ಮೊದಲು ಪತ್ತೆ ಹಚ್ಚಿದ್ದೆ ವೆನ್ಲಿಯಾಂಗ್ ಎಂದು ಹೇಳಲಾಗಿದೆ.
ವೆನ್ಲಿಯಾಂಗ್ ಓರ್ವ ನೇತ್ರಶಾಸ್ತ್ರಜ್ಞ. ವುಹಾನ್ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್ 30ರಲ್ಲಿ ತನ್ನ ಸ್ನೇಹಿತನಿಗೆ ಖಾಸಗಿ ಸಂದೇಶದ ಮೂಲಕ ಜಿಲ್ಲೆಯಾದ್ಯಂತ ಸೋಂಕು ಹರಡುತ್ತಿರುವುದಾಗಿ ತಿಳಿಸಿದ್ದರು.
ಚೀನಾದ ಕೇಂದ್ರ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್ನಲ್ಲಿ ಮೊದಲ ಬಾರಿಗೆ ವೈರಸ್ ಸೋಂಕು ಕಾಣಿಸಿಕೊಂಡಾಗ ವೆನ್ಲಿಯಾಂಗ್ ಮೊದಲು ವರದಿ ನೀಡಿದ್ದರು. ಕಳೆದ ಡಿಸೆಂಬರ್ನಲ್ಲೇ ವರದಿಯನ್ನು ನೀಡಿದ್ದರು. ಚೀನಾದ ಮೆಸೆಜಿಂಗ್ ಆ್ಯಪ್ ವೀಚ್ಯಾಟ್ ಮೂಲಕವು ಇತರೆ ವೈದ್ಯರಿಗೂ ಮಾಹಿತಿಯನ್ನು ತಿಳಿಸಿದ್ದರು.
ತನ್ನ ಆಸ್ಪತ್ರೆಯಲ್ಲಿ 7 ರೋಗಿಗಳು ದಾಖಲಾಗಿದ್ದಾರೆ. ಅವರಿಗೆ ಸಾರ್ಸ್ ರೀತಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ದಾಖಲಾಗಿರುವ ಏಳು ರೋಗಿಯೂ ಹುಬೈನಲ್ಲಿನ ಒಂದೇ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಪ್ರಾಣಿ ಮಾಂಸವನ್ನು ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.
ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಕೊರೊನಾ ವೈರಸ್ ಎಂಬುದು ತಿಳಿದಿದ್ದಾಗಿ ವೆನ್ಲಿಯಾಂಗ್ ವಿವರಿಸಿದ್ದರು. 2003ರಲ್ಲಿ ಚೀನಾ ಹಾಗೂ ವಿಶ್ವದ್ಯಾಂತ 800 ಜನರ ಸಾವಿಗೆ ಕಾರಣವಾಗಿದ್ದ ತೀವ್ರ ಉಸಿರಾಟದ ರೋಗದ ವೈರಸ್ (SARS-ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್) ಒಳಗೊಂಡಂತೆ ಬಹುದೊಡ್ಡ ವೈರಸ್ ಕುಟುಂಬವನ್ನು ಪರೀಕ್ಷೆಯಲ್ಲಿ ವೆನ್ಲಿಯಾಂಗ್ ಪತ್ತೆ ಹಚ್ಚಿ ಮಾಹಿತಿ ನೀಡಿದ್ದರು.
ವೆನ್ಲಿಯಾಂಗ್ ಅವರು ಮುಂಜಾಗ್ರತ ಕ್ರಮವಾಗಿ ತನ್ನ ಸ್ನೇಹಿತನಿಗೆ ಆತನ ಪ್ರೀತಿ ಪಾತ್ರರಾದವರನ್ನು ಕಾಪಾಡಿಕೊಳ್ಳಲು ಸಂದೇಶವನ್ನು ಕಳುಹಿಸಿದ್ದರು. ಆದರೆ, ರೋಗದ ಬಗ್ಗೆ ವೆನ್ಲಿಯಾಂಗ್ ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಅದು ಕಾಡ್ಗಿಚ್ಚಿನಂತೆ ಚೀನಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಾದ ಬಳಿಕ ವೆನ್ಲಿಯಾಂಗ್ ವಾದವನ್ನು ಚೀನಾ ಸರ್ಕಾರ ತಳ್ಳಿ ಹಾಕಿ, ಅವರನ್ನು ಬಂಧಿಸಿದ್ದರು. ಇದೀಗ ಅದೇ ವೈರಸ್ನಿಂದಲೇ ವೆನ್ಲಿಯಾಂಗ್ ಸಾವಿಗೀಡಾಗಿದ್ದು, ಸಾಕಷ್ಟು ಅನುಮಾನ ಹುಟ್ಟಿಸಿದೆ.
ವೆನ್ಲಿಯಾಂಗ್ ಸಾವಿಗೆ ಸಂತಾಪ ಸೂಚಿಸಿ, ಸರ್ಕಾರದ ವಿರುದ್ಧ ಚೀನಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ವೆನ್ಲಿಯಾಂಗ್ ತಾಯಿ ಕೂಡ ನನ್ನ ಮಗನಿಗೆ ಯಾವ ತೊಂದರೆಯು ಇರಲಿಲ್ಲ. ಅವನು ಸಮರ್ಥನಾಗಿದ್ದ ಎಂದು ತಿಳಿಸಿದ್ದಾರೆ. ಹೀಗಾಗಿ ವೆನ್ಲಿಯಾಂಗ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿರುವ ಹಿನ್ನೆಲೆಯಲ್ಲಿ ಇದೀಗ ತನಿಖೆಗೆ ಆದೇಶಿಸಲಾಗಿದೆ.
ಜನವರಿಯಲ್ಲಿ ಚೀನಾ ಸುಪ್ರೀಂಕೋರ್ಟ್ ಕೂಡ ವೈರಸ್ ಬಗ್ಗೆ ವದಂತಿ ಹುಟ್ಟುಹಾಕಿದವರನ್ನು ಶಿಕ್ಷಿಸಿದ್ದಕ್ಕೆ ವುಹಾನ್ ಪೊಲೀಸರನ್ನು ಟೀಕಿಸಿತ್ತು. ಆ ಸಮಯದಲ್ಲಿ ಜನರು ವದಂತಿಯನ್ನು ನಂಬಿದ್ದರೆ, ಇಂದು ವೈರಸ್ ಈ ಮಟ್ಟಿಗೆ ಪರಿಣಾಮ ಬೀರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಕೊರೊನಾ ವೈರಸ್ನಿಂದಾಗಿ ಚೀನಾದಲ್ಲಿ ಈವರೆಗೂ 630ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸುಮಾರು 31 ಸಾವಿರ ಮಂದಿ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. (ಏಜೆನ್ಸೀಸ್)