

ನವದೆಹಲಿ: ಚೀನಾ 50 ಸಶಸ್ತ್ರ ಡ್ರೋನ್ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲಿದ್ದು, ಇದು ಭಾರತಕ್ಕೆ ಸವಾಲಾಗಲಿದೆ ಎಂದು ಚೀನಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನಕ್ಕೆ 50 ವಿಂಗ್ ಲೂಂಗ್-2 ಸಶಸ್ತ್ರ ಡ್ರೋನ್ಗಳನ್ನು ಪೂರೈಸಲು ಪಿಎಲ್ಎ ನಿರ್ಧರಿಸಿದೆ. ಈ ಡ್ರೋನ್ಗಳು ತುಂಬಾ ಪರಿಣಾಮಕಾರಿಯಾಗಿದ್ದು ಭಾರತಕ್ಕೆ ದುಃಸ್ವಪ್ನವಾಗಲಿದೆ ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಅತ್ಯಾಧುನಿಕ ಡ್ರೋನ್ಗಳಿಗೆ ಸರಿಸಾಟಿಯಾದ ಅಸ್ತ್ರಗಳು ಭಾರತದ ಮಿಲಿಟರಿ ಬಳಿ ಇಲ್ಲದಿರುವುದರಿಂದ ಎತ್ತರದ ಪ್ರದೇಶಗಳಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಹೇಳುವ ಮೂಲಕ ಭಾರತದ ಮೇಲೆ ಮಾನಸಿಕ ಒತ್ತಡ ಹೇರುವುದು ಚೀನಾದ ತಂತ್ರವಾಗಿದೆ.
ಭಾರತದ ತಿರುಗೇಟು: ಚೀನಾದ ಈ ತಂತ್ರಕ್ಕೆ ತಿರುಗೇಟು ನೀಡಿರುವ ಭಾರತ, ಪಾಕ್ಗೆ ಪೂರೈಸಲಾಗುತ್ತಿರುವ ಈ ಡ್ರೋನ್ಗಳು ಯಾವ ಲೆಕ್ಕಕ್ಕೂ ಇಲ್ಲ. ಪ್ರತಿಸ್ಪರ್ಧಿಗಳು ಇಲ್ಲದ ವಾಯು ಪ್ರದೇಶದಲ್ಲಿ ಇವು ಪಾರಮ್ಯ ಹೊಂದಿರಬಹುದು. ಆದರೆ, ಭಾರತದ ವಿಷಯದಲ್ಲಿ ಅಲ್ಲ ಎಂದು ಭಾರತೀಯ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ನೇಪಾಳಕ್ಕೆ ಚೀನಾ ತಂಡ: ನೇಪಾಳ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನಗೊಳಿಸುವ ಕೊನೆಯ ಪ್ರಯತ್ನವಾಗಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ನಾಲ್ವರ ತಂಡವನ್ನು ನೇಪಾಳಕ್ಕೆ ಕಳುಹಿಸಲಿದ್ದಾರೆ.