ಚೀನಾ ನೋಟುಗಳ ಮೇಲೆಯೂ ಕೊರೊನಾ ವಕ್ರದೃಷ್ಟಿ: ನೋಟುಗಳ ಬಂಡಲ್​ ಕಟ್ಟಿ ಸೈಡಿಗಿಡುತ್ತಿರುವ ಬ್ಯಾಂಕ್​ಗಳು!

China Currency
Published on

ವುಹಾನ್​: ಮಾರಕ ಕೊರೊನಾ ವೈರಸ್​ ಚೀನಾ ಜನತೆಯನ್ನು ತಮ್ಮ ಮನೆ ಮತ್ತು ಪಟ್ಟಣಗಳಲ್ಲಿ ನಿರ್ಬಂಧಿಸಿದ್ದು, ಇದೀಗ ಬ್ಯಾಂಕಿನ ಹಳೆಯ ನೋಟುಗಳ ಮೇಲೆಯೂ ತನ್ನ ವಕ್ರದೃಷ್ಟಿ ಬೀರಿದೆ. ಸರ್ಕಾರದ ಆದೇಶದಂತೆ ನೋಟುಗಳನ್ನು ಬೇರ್ಪಡಿಸುವ ಕಾರ್ಯದಲ್ಲಿ ಬ್ಯಾಂಕ್​ಗಳು ಮುಂದಾಗಿದೆ.

ವೈರಸ್​ ಸೋಂಕು ತಡೆಯುವ ನಿಟ್ಟಿನಲ್ಲಿ ಚೀನಾ ಸರ್ಕಾರ ಹಳೆಯ ನೋಟುಗಳ ವರ್ಗಾವಣೆ ಮತ್ತು ಹಂಚಿಕೆಯನ್ನು ಹೆಚ್ಚಾಗಿ ವೈರಸ್​ ಹರಡಿರುವ ಪ್ರದೇಶಗಳಲ್ಲಿ ನಿರ್ಬಂಧಿಸಿದೆ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೀಪಲ್ಸ್​ ಬ್ಯಾಂಕ್​ ಆಫ್​ ಚೀನಾ ಡೆಪ್ಯುಟಿ ಗವರ್ನರ್​ ಫ್ಯಾನ್​ ಯಿಫೈ ತಿಳಿಸಿದ್ದಾರೆ.

ಸಾಂಕ್ರಮಿಕ ರೋಗವನ್ನು ತಗ್ಗಿಸುವ ಹಾಗೂ ಹೆಚ್ಚಾಗಿ ಹರಡದಿರಲಿ ಎಂಬ ಉದ್ದೇಶದಿಂದ ಹಳೆಯ ನೋಟುಗಳನ್ನು ಸಂಗ್ರಹಿಸಿ ಅವುಗಳನ್ನು ಶುಚಿಗೊಳಿಸುವ ಕೆಲಸಕ್ಕೆ ಮುಂದಾಗಿವೆ. ಇದರಿಂದ ಹಣಕಾಸು ವಹಿವಾಟಿಗೆ ತೊಂದರೆಯಾಗದಿರಲು 600 ಬಿಲಿಯನ್​ ಯುವಾನ್ ​​(61,42,19,61,48,000 ರೂ.) ನಗದನ್ನು ಹೆಚ್ಚಾಗಿ ವೈರಸ್​ ಹರಡಿರುವ ಹುಬೇ ಪ್ರಾಂತ್ಯದಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದೆ ಫ್ಯಾನ್​ ಯಿಫೈ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ವೈರಸ್​ ಪೀಡಿತ ಪ್ರದೇಶಗಳಲ್ಲಿ ಹರಿದಾಡಿರುವ ನೋಟುಗಳಿಗೂ ಸೋಂಕು ತಟ್ಟಿರುತ್ತದೆ. ಹೀಗಾಗಿ ಹಳೆಯ ನೋಟುಗಳನ್ನು ಅಲ್ಟ್ರಾವೈಲೆಟ್​ ಕಿರಣಗಳ ಮೂಲಕ ಅಥವಾ 14 ದಿನಗಳವರೆಗೂ ಲಾಕ್​ ಮಾಡಿ ತಾಪದಲ್ಲಿ ಇಟ್ಟು ಬಳಿಕ ವಿತರಣೆ ಮಾಡಬೇಕಿದೆ ಎಂದು ಫ್ಯಾನ್​ ಯಿಫೈ ಹೇಳಿದ್ದಾರೆ.

ಮೊಬೈಲ್​ ಬಳಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ನಗದು ವಹಿವಾಟು ಬಹಳಷ್ಟು ಕಡಿಮೆಯಾಗಿದ್ದು, ಹಿರಿಯ ನಾಗರಿಕರು ಮಾತ್ರ ದಿನನಿತ್ಯದ ವಹಿವಾಟಿಗಾಗಿ ನಗದನ್ನು ಉಪಯೋಗಿಸುತ್ತಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net