

ನವದೆಹಲಿ: ಶತ್ರುಗಳ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಲಡಾಖ್ ಗಡಿಗೆ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಹೊಸ ರಸ್ತೆಯೊಂದನ್ನು ನಿರ್ವಿುಸಲು ಭಾರತ ಯೋಜನೆ ರೂಪಿಸಿದೆ. ಮನಾಲಿಯಿಂದ ಲೇಹ್ವರೆಗೆ ನಿರ್ವಣವಾಗುವ ಈ ಮಾರ್ಗ, ಕೇಂದ್ರಾಡಳಿತ ಪ್ರದೇಶದ ಅತಿ ಎತ್ತರದ ಗುಡ್ಡಗಾಡು ಪ್ರದೇಶದ ಮಾರ್ಗವಾಗಲಿದೆ.
ವ್ಯೂಹಾತ್ಮಕವಾಗಿ ಮುಖ್ಯವಾಗಿರುವ ದೌಲತ್ ಬೇಗ್ ಓಲ್ಡಿ ಮತ್ತು ಇತರ ಭಾಗಗಳಿಗೆ ಪರ್ಯಾಯ ಸಂಪರ್ಕ ಕಲ್ಪಿಸಲು ಮೂರು ವರ್ಷಗಳಿಂದ ಭಾರತ ಕೆಲಸ ಮಾಡುತ್ತಿದೆ. ಖರ್ದುಂಗ್ ಲಾ ಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ.
ನಿಮು-ಪದಂ-ಡರ್ಚಾ ಮಾರ್ಗ ಮೂಲಕ ಮನಾಲಿಯಿಂದ ಲೇಹ್ಗೆ ಸಂಪರ್ಕ ಸಾಧಿಸಲು ಯೋಜನೆ ಸಿದ್ಧವಾಗುತ್ತಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ಜತೆಗೆ ಭಾರತೀಯ ಯೋಧರ ಚಲನವಲನ ಅಥವಾ ನಿಯೋಜನೆ ಮೇಲೆ ನಿಗಾ ಇಡಲು ಬೇರೆ ಯಾವುದೇ ರಾಷ್ಟ್ರಕ್ಕೆ ಸಾಧ್ಯವಾಗುವುದಿಲ್ಲ. ಲಡಾಖ್ ಪ್ರದೇಶಕ್ಕೆ ಇತರ ಭಾಗಗಳಿಂದ ಬೃಹತ್ ಟ್ಯಾಂಕ್ಗಳು ಮತ್ತು ಫಿರಂಗಿಗಳನ್ನು ಸಾಗಿಸುವುದನ್ನು ಗಮನಿಸಲೂ ಶತ್ರುಗಳಿಗೆ ಸಾಧ್ಯವಾಗುವುದಿಲ್ಲ. ಪ್ರಸ್ತುತ ಡ್ರಾಸ್-ಕಾರ್ಗಿಲ್ ಮಾರ್ಗವಾಗಿ ಲೇಹ್ ಮೂಲಕ ಸರಕು ಮತ್ತು ಯೋಧರನ್ನು ಸಾಗಿಸಲಾಗುತ್ತಿದೆ. 1999ರಲ್ಲಿ ಕಾರ್ಗಿಲ್ ಸಮರದ ವೇಳೆ ಪಾಕಿಸ್ತಾನ ಸೈನಿಕರು ಈ ಮಾರ್ಗದ ಮೇಲೆಯೇ ದಾಳಿ ನಡೆಸಿದ್ದರು.