

ನರೇಂದ್ರ ಮೋದಿ ಮತ್ತು ತೈವಾನ್ ಅಧ್ಯಕ್ಷ ಲಾಯ್ ಚಿಂಗ್ ಟೆ ನಡುವಿನ ಅಭಿನಂದನಾ ಸಂದೇಶಗಳ ವಿನಿಮಯಕ್ಕೆ ಚೀನಾದ ಆಕ್ಷೇಪವನ್ನು ತೈವಾನ್ ಶುಕ್ರವಾರ(ಜೂನ್ 7) ತಿರಸ್ಕರಿಸಿದೆ. ವಿಶ್ವ ಸಮುದಾಯವನ್ನು ದಾರಿ ತಪ್ಪಿಸಲು ಚೀನಾ ರಾಜಕೀಯ ಒತ್ತಡ ಹೇರುತ್ತಿದೆ ಮತ್ತು ತಪ್ಪು ಕಲ್ಪನೆಗಳನ್ನು ಹರಡುತ್ತಿದೆ ಎಂದು ತೈವಾನ್ ಹೇಳಿದೆ.
ವಾಸ್ತವವಾಗಿ ತೈವಾನ್ ಅಧ್ಯಕ್ಷರು ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಗೆಲುವಿಗಾಗಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಅವರು ತೈವಾನ್ನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರ. ಮೋದಿ ಅವರ ಈ ಉತ್ತರದಿಂದ ಚೀನಾ ಕೆರಳಿದೆ.
ತೈವಾನ್ ಅಧಿಕಾರಿಗಳ ರಾಜಕೀಯ ನಡೆಗಳನ್ನು ನವದೆಹಲಿ ವಿರೋಧಿಸಬೇಕು ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿತು. ತೈವಾನ್ ಚೀನಾದ ಅವಿಭಾಜ್ಯ ಪ್ರಾಂತ್ಯವಾಗಿದೆ. ಭೂಭಾಗದೊಂದಿಗೆ ಮರುಸೇರ್ಪಡೆಯಾಗಬೇಕು ಎಂಬುದು ಅದರ ಉದ್ದೇಶವಾಗಿದೆ.
ಮೂರನೇ ಅವಧಿಗೆ ಮೋದಿಯವರನ್ನು ಅಭಿನಂದಿಸಿದ ವಿಶ್ವ ನಾಯಕರಲ್ಲಿ ಲಾಯ್ ಚಿಂಗ್ ಟೆ ಒಬ್ಬರು. ಕಳೆದ ತಿಂಗಳಷ್ಟೇ ಅವರು ತೈವಾನ್ ಅಧ್ಯಕ್ಷರಾಗಿದ್ದಾರೆ. ತಮ್ಮ ಎಕ್ಸ್ ಖಾತೆಯ ಪೋಸ್ಟ್ನಲ್ಲಿ ಚುನಾವಣೆಯಲ್ಲಿ ಜಯಗಳಿಸಿದ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್-ಭಾರತ ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ವಲಯಗಳಲ್ಲಿ ಸಹಯೋಗವನ್ನು ವಿಸ್ತರಿಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು.
ಈ ಸಂದೇಶಕ್ಕ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ, ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಸಹಭಾಗಿತ್ವದತ್ತ ಕೆಲಸ ಮಾಡುವ ಮೂಲಕ ಇನ್ನಷ್ಟು ನಿಕಟ ಸಂಬಂಧಗಳಿಗಾಗಿ ನಾವು ಎದುರು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಸಿದರು. (ಏಜೆನ್ಸೀಸ್)