ಕ್ವಾಡ್​ ಟೀಕೆಗೆ ಚೀನಾಕ್ಕೆ ಭಾರತ ಎದಿರೇಟು: ಗಡಿ ಬಿಕ್ಕಟ್ಟಿಗೆ ನೆರೆ ದೇಶವೇ ಕಾರಣವೆಂದ ಜೈಶಂಕರ್​

India - Pak
Published on

ನವದೆಹಲಿ/ಮೆಲ್ಬೋರ್ನ್​: ನಾಲ್ಕು ದೇಶಗಳ ಕ್ವಾಡ್​ ಕೂಟ ಚೀನಾವನ್ನು ಕಟ್ಟಿ ಹಾಕಿ ಅಮೆರಿಕದ ಅಧಿಪತ್ಯವನ್ನು ಉಳಿಸಿಕೊಳ್ಳುವ ಸಾಧನವಾಗಿದೆ ಎಂದು ಚೀನಾ ಮಾಡಿರುವ ಟೀಕೆಗೆ ಭಾರತ ಖಡಕ್​ ತಿರುಗೇಟು ನೀಡಿದೆ. ಕ್ವಾಡ್​ ಧೋರಣೆ ಹಾಗೂ ಕೃತ್ಯಗಳು ಸ್ಪಷ್ಟವಾಗಿವೆ. ಅದನ್ನು ಪದೇ ಪದೇ ಟೀಕಿಸುವುದರಿಂದ ಕೂಟದ ವಿಶ್ವಾಸಾರ್ಹತೆ ಕುಂದುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಶನಿವಾರ ಹೇಳಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಬಿಗುವು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳವಳದ ಸಂಗತಿಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ವಾಸ್ತವ ಗಡಿ ರೇಖೆಯಲ್ಲಿ (ಎಲ್​ಎಸಿ) ಪಡೆಗಳನ್ನು ಜಮಾಯಿಸಬಾರದು ಎಂಬ ಭಾರತದೊಂದಿಗೆ 2020ರಲ್ಲಿ ಮಾಡಿಕೊಂಡ ಲಿಖಿತ ಒಪ್ಪಂದವನ್ನು ಚೀನಾ ಅಗೌರವಿಸಿದ್ದೇ ಈಗಿನ ಪರಿಸ್ಥಿತಿ ಉದ್ಭವಿಸಲು ಕಾರಣ ಎಂದು ಅವರು ಹೇಳಿದ್ದಾರೆ.

ಕ್ವಾಡ್​ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಬಗ್ಗೆ ಚರ್ಚೆ ನಡೆದಿದೆ ಎಂದೂ ಜೈಶಂಕರ್​ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ವಿವಾದದ ಬಗ್ಗೆ ಜಾಗತಿಕ ಸಮುದಾಯ, ಅದರಲ್ಲೂ ವಿಶೇಷವಾಗಿ ಇಂಡೊ- ಪೆಸಿಫಿಕ್​ ವಲಯದ ದೇಶಗಳು ಕಾಳಜಿ ವಹಿಸಲು ಸಕಾರಣವಿದೆ ಎಂದು ಹೇಳಿದ್ದಾರೆ.

ಕ್ವಾಡ್​ನ ಧನಾತ್ಮಕ ಕೊಡುಗೆ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಬೇಕಿಲ್ಲ ಎಂದ ಜೈಶಂಕರ್​, ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಸಹಿ ಹಾಕಿದ್ದ ಬ್ಯಾಟ್​ಒಂದನ್ನು ಆಸ್ಟ್ರೆಲಿಯಾ ವಿದೇಶ ಸಚಿವೆ ಮಾರಿಸ್​ ಪೈನ್​ರಿಗೆ ಕೊಡುಗೆಯಾಗಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net