ಲಡಾಖ್​ನಲ್ಲಿ ಅತಿಕ್ರಮಣ, ವಿಶ್ವಸಂಸ್ಥೆಯಲ್ಲಿ ಶಾಂತಿ ಮಂತ್ರಪಠಣ

xi jinping vvani
Published on

ನವದೆಹಲಿ/ಬೀಜಿಂಗ್: ಚೀನಾ ಎಂದಿಗೂ ಪ್ರಾಬಲ್ಯ ವಿಸ್ತರಣೆ ಅಥವಾ ಪ್ರಭಾವ ಹೆಚ್ಚಿಸುವುದನ್ನು ಬಯಸುವುದಿಲ್ಲ. ಇತರ ದೇಶಗಳ ಜತೆಗೆ ಶೀತಲ ಸಮರ ಅಥವಾ ಯುದ್ಧದ ವಾತಾವರಣವನ್ನು ಹೊಂದುವ ಉದ್ದೇಶವೂ ಇಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹೇಳಿದ್ದಾರೆ.

ವಿಶ್ವಸಂಸ್ಥೆಯ 75ನೇ ಅಧಿವೇಶನದ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಜಿನ್​ಪಿಂಗ್, ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಲು ಮತ್ತು ಮಾತುಕತೆಗಳ ಮೂಲಕ ಇತರರೊಂದಿಗೆ ವಿವಾದಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾ ಮುಂದುವರಿಯುತ್ತದೆ. ಸಮಾಲೋಚನೆಯ ಮೂಲಕ ಇತರ ದೇಶಗಳೊಂದಿಗಿನ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಪೂರ್ವ ಲಡಾಖ್​ನಲ್ಲಿ ಭಾರತದೊಂದಿಗೆ ಕಳೆದ ಕೆಲ ತಿಂಗಳಿನಿಂದ ವಿವಾದ ನಡೆಯುತ್ತಿರುವ ಬೆನ್ನಲ್ಲೆ ಜಿನ್​ಪಿಂಗ್ ಈ ಹೇಳಿಕೆ ನೀಡಿದ್ದಾರೆ. ಕರೊನಾ ಬಿಕ್ಕಟ್ಟಿನ ಬಗ್ಗೆಯೂ ಮಾತನಾಡಿದ ಚೀನಾ ಅಧ್ಯಕ್ಷರು, ವೈರಸ್​ನ್ನು ಎದುರಿಸಲು ನಾವು ಒಗ್ಗಟ್ಟನ್ನು ಹೆಚ್ಚಿಸಬೇಕು. ಜಂಟಿ ಅಂತಾರಾಷ್ಟ್ರೀಯ ಪ್ರಕ್ರಿಯೆ ಮೂಲಕ ವೈರಸ್ ಸೋಲಿಸಬೇಕು. ಸಮಸ್ಯೆಯನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕೂ ಮುನ್ನ ಚೀನಾ ವಿರುದ್ಧ ಹರಿಹಾಯ್ದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಇಡೀ ಜಗತ್ತಿಗೆ ವೈರಸ್ ಹರಡಿದೆ. ಸುಮಾರು 10 ಲಕ್ಷ ಮಂದಿ ಮರಣಕ್ಕೆ ಚೀನಾವನ್ನೇ ಹೊಣೆಗಾರನನ್ನಾಗಿ ಮಾಡಬೇಕು ಎಂದಿದ್ದರು. ಜತೆಗೆ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಕರೊನಾ ಮಾನವರಿಂದ ಮಾನವರಿಗೆ ಹರಡುವ ಯಾವುದೇ ಪುರಾವೆಗಳಿಲ್ಲ ಎಂದು ತಪ್ಪಾಗಿ ಹೇಳಿದ್ದವು ಎಂದು ಕಿಡಿ ಕಾರಿದ್ದರು.

ಚೀನಾ ವಿರುದ್ಧ ನೇಪಾಳದಲ್ಲಿ ಪ್ರತಿಭಟನೆ

ನೇಪಾಳಕ್ಕೆ ಸೇರಿದ ಭೂಪ್ರದೇಶದೊಳಗೆ ಏಕಪಕ್ಷೀಯವಾಗಿ 11 ಕಟ್ಟಡಗಳನ್ನು ನಿರ್ವಿುಸಿರುವ ಚೀನಾದ ಕ್ರಮವನ್ನು ವಿರೋಧಿಸಿ ನೇಪಾಳದ ವಿವಿಧೆಡೆ ಪ್ರತಿಭಟನೆ ನಡೆದಿವೆ. ನೇಪಾಳದ ಉತ್ತರ ಹಮ್ಲಾ ಜಿಲ್ಲೆಯಲ್ಲಿ ಚೀನಾ ಕಟ್ಟಡಗಳನ್ನು ನಿರ್ವಿುಸಿದ್ದು, ಈಗ ಆ ಪ್ರದೇಶ ತನ್ನದೇ ಎಂದು ಹೇಳಿ ಕೊಳ್ಳುತ್ತಿದೆ. ಹೀಗಾಗಿ ಚೀನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನೇಪಾಳಿಗರು, ‘‘ಬ್ಯಾಕ್ ಆಫ್ ಚೀನಾ’ ಎಂಬ ಬ್ಯಾನರ್​ಗಳನ್ನುಹಿಡಿದು ಪ್ರತಿಭಟಿಸಿದ್ದಾರೆ. ಅನೇಕರು ಶಸ್ತ್ರಸಜ್ಜಿತವಾಗಿ ರಸ್ತೆಗಿಳಿದು ಚೀನಾ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

್ಝಶ್ವಸಂಸ್ಥೆಯಲ್ಲಿ ಕಾಶ್ಮೀರದ ಕುರಿತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎಡೋಗನ್ ಮಾತನಾಡಿದ ಟಿಪ್ಪಣಿಗೆ ಭಾರತ ಆಕ್ಷೇಪ.ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಬೇಡ ಎಂದು ಹೇಳಿಕೆ.

ಚೀನಾ ಹಣಕಾಸು ಅಕ್ರಮಕ್ಕೆ ಬೈಲುಕುಪ್ಪೆ ನಂಟು

ಅಕ್ರಮ ಹಣ ವರ್ಗಾವಣೆ ನಡೆಸುತ್ತಿದ್ದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿರುವ ಚಾರ್ಲಿ ಪೆಂಗ್ ಎಂಬ ವ್ಯಕ್ತಿ ಬೌದ್ಧ ಧರ್ಮ ಗುರು ದಲೈಲಾಮಾ ಹಾಗೂ ಅವರ ಸಹಚರರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲು ಕರ್ನಾಟಕದ ಬೈಲುಕುಪ್ಪೆಯಲ್ಲಿರುವ ಸೆರಾ ಮೇ ಬೌದ್ಧ ಮಠದ ಹಲವು ಸನ್ಯಾಸಿಗಳಿಗೆ ಹಣ ನೀಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. ಸೆರಾ ಮೇ ಮಠದ ಜಮಾಯಂಗ್ ಜಿನ್ಪಾ ಎಂಬ ಸನ್ಯಾಸಿಗೆ ‘ಎಸ್.ಕೆ. ಟ್ರೇಡಿಂಗ್’ ಖಾತೆಯಿಂದ 30 ಲಕ್ಷ ರೂ. ನೀಡಲಾಗಿದೆ. ಜತೆಗೆ ಥುಪ್ಟನ್ ಚೋಡಕ್​ಗೆ 15 ಲಕ್ಷ ರೂ., ಫ್ರುಂಡ್​ಸೋಕ್ ಧಾರ್ಗ್ಯಾಲ್, ನ್ಗಾವಾಂಗ್ ಲೊಸೆಲ್ ಮತ್ತು ತಾಶಿ ಚೊಯೆಪಲ್ ಎಂಬುವವರಿಗೆ ತಲಾ 10 ಲಕ್ಷ ರೂ. ಹಣ ವರ್ಗಾಯಿಸಲಾಗಿದೆ ಎನ್ನಲಾಗಿದೆ. ಸನ್ಯಾಸಿಗಳಿಗೆ ಹಣ ವರ್ಗಾಯಿಸಲು ಪೆಂಗ್ ಹಲವಾರು ಶೆಲ್ ಕಂಪನಿಗಳ ಖಾತೆ ಬಳಸಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧೆಡೆ ಇರುವ ಬೌದ್ಧ ಸನ್ಯಾಸಿಗಳಿಗೆ ಪೆಂಗ್ ಹಣ ನೀಡಿದ್ದಾನೆ ಎನ್ನಲಾಗಿದ್ದು, ಈ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚೀನಾದ ವ್ಯಕ್ತಿಯನ್ನೇ ಬೌದ್ಧ ಧರ್ಮದ ಮುಂದಿನ ದಲೈಲಾಮಾರನ್ನಾಗಿ ಮಾಡಲು ಈ ಹುನ್ನಾರ ನಡೆದಿದೆ ಎನ್ನಲಾಗಿದೆ. ಮೈಸೂರು ಜಿಲ್ಲೆಯ ಬೈಲುಕುಪ್ಪೆಯಲ್ಲಿ ಬೌದ್ಧ ಧರ್ಮಶಾಲೆ ಇದ್ದು, ಟಿಬೆಟ್ ಬಳಿಕ ಅತಿ ಹೆಚ್ಚು ಬೌದ್ಧರು ವಾಸಿಸುವ ಸ್ಥಳವಾಗಿದೆ.

ಬೆಟ್ಟಿಂಗ್ ತನಿಖೆ ಚುರುಕು

ನಿಷೇಧಿತ ಆಪ್​ಗಳನ್ನು ಬಳಸಿಕೊಂಡು ಚೀನಾದ ಪ್ರಜೆಗಳು ನಡೆಸುತ್ತಿರುವ ಸುಮಾರು 1 ಸಾವಿರ ಕೋಟಿ ರೂ. ಅಕ್ರಮ ಬೆಟ್ಟಿಂಗ್ ವಹಿವಾಟಿನಲ್ಲಿ ಪೇಟಿಎಂ ಮತ್ತು ಎಚ್​ಎಸ್​ಬಿಸಿ ಬ್ಯಾಂಕ್ ಖಾತೆಗಳ ಮೂಲಕ ಹಣ ಪಡೆದ ಪ್ರಮುಖ ಫಲಾನುಭವಿಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಪ್ರಕರಣ ಸಂಬಂಧ ಬಂಧಿತರಾಗಿರುವ ಚೀನಾ ಪ್ರಜೆ ಸೇರಿ 8 ಮಂದಿಯನ್ನು ಹೈದರಾಬಾದ್​ನ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿಶೇಷ ನ್ಯಾಯಾ ಲಯವು 8 ದಿನಗಳ ಕಾಲ ಇಡಿ ವಶಕ್ಕೆ ನೀಡಿದೆ.

ಟಿಬೆಟಿಗರ ಮೇಲೆ ಚೀನಾ ದೌರ್ಜನ್ಯ

ಟಿಬೆಟ್​ನ ಗ್ರಾಮೀಣ ಭಾಗದ ಕಾರ್ವಿುಕರನ್ನು ಚೀನಾ ಬಲವಂತವಾಗಿ ಕೆಲಸಗಳಿಗೆ ನಿಯೋಜಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಾವಿರಾರು ಕಾರ್ವಿುಕರನ್ನು ಬಲವಂತವಾಗಿ ಕರೆದೊಯ್ದು ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. 2020ರ ಮೊದಲ 7 ತಿಂಗಳಲ್ಲಿ ಟಿಬೆಟ್​ನ ಸುಮಾರು 5 ಲಕ್ಷ ಅಂದರೆ ಜನಸಂಖ್ಯೆಯ ಶೇಕಡ 15 ಮಂದಿಗೆ ತರಬೇತಿ ನೀಡಿದೆ. ಇದರಲ್ಲಿ ಸುಮಾರು 50 ಸಾವಿರ ಜನರನ್ನು ಟಿಬೆಟ್​ನ ಒಳಗೆ ಹಾಗೂ ಇನ್ನೂ ಕೆಲ ಸಾವಿರದಷ್ಟು ಜನರನ್ನು ಚೀನಾದ ವಿವಿಧೆಡೆ ನಡೆಯುತ್ತಿರುವ ಯೋಜನೆಗಳಿಗೆ ಉದ್ಯೋಗಿಗಳನ್ನಾಗಿ ರವಾನಿಸಲಾಗಿದೆ. ಚೀನಾದ ಜವಳಿ ಉತ್ಪಾದನೆ, ನಿರ್ಮಾಣ ಮತ್ತು ಕೃಷಿ ಸೇರಿ ಅನೇಕ ಕೆಲಸಗಳಲ್ಲಿ ಜನರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net