ಕೊನೆಗೂ ಜಾಗತಿಕ ಒತ್ತಡಕ್ಕೆ ಮಣಿದ ಚೀನಾ ಮತ್ತು ಡಬ್ಲ್ಯುಎಚ್​ಒ

china xi jinping
Published on

ನವದೆಹಲಿ: ಕರೊನಾ ವೈರಾಣು ಉಗಮದ ಕುರಿತು ತನಿಖೆಗೆ ಒಳಪಡುವಂತೆ ಜಾಗತಿಕವಾಗಿ ನಿರ್ಮಾಣವಾಗಿದ್ದ ಒತ್ತಡಕ್ಕೆ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮಣಿದಿವೆ. ಕರೊನಾ ವೈರಾಣು ವಿಷಯವನ್ನು ಬಹಿರಂಗಪಡಿಸುವ ವಿಷಯವಾಗಿ ಚೀನಾದ ಆಣತಿಯಂತೆ ನಡೆದುಕೊಂಡಿದ್ದರ ಬಗ್ಗೆ ಡಬ್ಲ್ಯುಎಚ್​ಒ ತನಿಖೆಗೆ ಒಳಪಡಲಿದೆ.

ಕರೊನಾ ವೈರಾಣುವಿನ ಉಗಮ ಮತ್ತು ಹರಡುವಿಕೆ ಕುರಿತು ಚೀನಾದ ವಿರುದ್ಧ ತನಿಖೆ ನಡೆಯಬೇಕು ಎಂದು ಯುರೋಪಿಯನ್​ ಒಕ್ಕೂಟ ಡಬ್ಲ್ಯುಎಚ್​ಒದಲ್ಲಿ ನಿಲುವಳಿ ಸೂಚನೆ ಮಂಡಿಸಲು ಸಿದ್ಧತೆ ನಡೆಸಿತ್ತು. ಇದಕ್ಕೆ ಭಾರತ ಸೇರಿ 120 ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದ್ದವು. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರಿಗೆ ಸೂಚಿಸಲಾಗಿತ್ತು. ಆದರೆ ಮೊದಲಿಗೆ ಇದಕ್ಕೆ ನಿರಾಕರಿಸಿದ್ದ ಚೀನಾ, ಇದೀಗ ಜಾಗತಿಕ ಒತ್ತಡಕ್ಕೆ ಮಣಿದು ತನಿಖೆಗೆ ಒಳಪಡಲು ನಿರ್ಧರಿಸಿದೆ.

ತನಿಖೆಗೆ ಒಳಪಡಲು ಸಿದ್ಧ. ಆದರೆ, ಮೊದಲಿಗೆ ಜಾಗತಿಕವಾಗಿ ಹಬ್ಬಿರುವ ಕರೊನಾ ಪಿಡುಗನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಬಗ್ಗೆ ಗಮನಹರಿಸೋಣ. ಅದು ನಿಯಂತ್ರಣಕ್ಕೆ ಬಂದ ಬಳಿಕ ತನಿಖೆ ನಡೆಯಲಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹೇಳಿದ್ದಾರೆ.

ಯುರೋಪಿಯಿನ್​ ಒಕ್ಕೂಟ ರೂಪಿಸಿ, ಮಂಡಿಸಿರುವ ನಿಲುವಳಿ ಕುರಿತು ಡಬ್ಲ್ಯುಎಚ್​ಒದಲ್ಲಿ ಮಂಗಳವಾರ ಚರ್ಚೆಗಳು ಆರಂಭವಾಗುವ ಸಾಧ್ಯತೆ ಇದೆ. ಇದೀಗ ತನಿಖೆಗೆ ಆದೇಶಿಸುವ ಕ್ರಮ ಕೇವಲ ಔಪಚಾರಿಕವಾಗಿದೆ. ಇದನ್ನು ವಿರೋಧಿಸುವವರು ಯಾರೂ ಇಲ್ಲವಾಗಿದ್ದಾರೆ ಎಂದು ಡಬ್ಲ್ಯುಎಚ್​ಒದ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net