ಭಾರತದ ವಿರುದ್ಧ ಡಬ್ಲ್ಯುಟಿಒಗೆ ಚೀನಾ ದೂರು

Untitled design (6)
Published on

ನವದೆಹಲಿ: ಭಾರತದ ಪೊ›ಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಯೋಜನೆಯ ಕೆಲವು ಷರತ್ತುಗಳು, ಅಡ್ವಾನ್ಸ್​ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ, ಎಲೆಕ್ಟ್ರಿಕ್ ಮತ್ತು ಇತರ ವಾಹನಗಳ ತಯಾರಿಕೆಯನ್ನು ಉತ್ತೇಜಿಸುವ ನೀತಿಗಳು ಜಾಗತಿಕ ವ್ಯಾಪಾರ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ಆರೋಪಿಸಿರುವ ಚೀನಾ, ಇದಕ್ಕೆ ಸಂಬಂಧಿಸಿದಂತೆ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ಸಲ್ಲಿಸಿದೆ.

ಈ ಕುರಿತು ಭಾರತದೊಂದಿಗೆ ತಾನು ಸಮಾಲೋಚಿಸಲು ಇಚ್ಛಿಸಿರುವುದಾಗಿ ಚೀನಾ ತಿಳಿಸಿದೆ ಎಂದು ಜಿನೀವಾ ಮೂಲದ ಡಬ್ಲ್ಯುಟಿಒ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಅಳವಡಿಸಿಕೊಂಡ ಕ್ರಮಗಳು ಸ್ಥಳೀಯ ಉತ್ಪನ್ನಗಳ ಬಳಕೆಗೆ ಸಂಬಂಧಿಸಿದಂತೆ ಇದ್ದರೂ ಅವುಗಳಿಂದ ಚೀನಾದ ಸರಕುಗಳ ಮಾರಾಟಕ್ಕೆ ಅನ್ಯಾಯವಾಗುತ್ತಿದೆ ಎಂದು ಚೀನಾ ಹೇಳಿದೆ. ಭಾರತದ ಈ ಕ್ರಮಗಳು ಸಬ್ಸಿಡೀಸ್ ಆಂಡ್ ಕೌಂಟರ್​ವೇಲಿಂಗ್ ಮೆಜರ್ಸ್ (ಎಸ್​ಸಿಎಂ) ಒಪ್ಪಂದ, ಜನರಲ್ ಅಗ್ರಿಮೆಂಟ್ ಆನ್ ಟಾರಿಫ್ಸ್ ಆಂಡ್ ಟ್ರೇಡ್ (ಗ್ಯಾಟ್) 1994 ಮತ್ತು ಟ್ರೇಡ್ ರಿಲೇಟೆಡ್ ಇನ್ವೆಸ್ಟ್​ಮೆಂಟ್ ಮೆಜರ್ಸ್ (ಟ್ರಿಮ್್ಸ) ಒಪ್ಪಂದಗಳನ್ನು ಉಲ್ಲಂಘಿಸುತ್ತವೆ.

ಇದರಿಂದಾಗಿ ಚೀನಾಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಿಗುವ ಲಾಭಗಳು ಸಿಗುವುದಿಲ್ಲ ಎಂದು ಚೀನಾ ಆರೋಪಿಸಿದೆ. ಚೀನಾ ಭಾರತದಿಂದ ಈ ಬಗ್ಗೆ ಉತ್ತರ ಪಡೆಯಲು ಉತ್ಸುಕವಾಗಿದೆ. ಪರಸ್ಪರ ಒಪ್ಪಿಗೆಯಾಗುವ ದಿನಾಂಕದಂದು ಸಮಾಲೋಚನೆಗೆ ಒಪ್ಪಿಕೊಳ್ಳಲು ಎದುರುನೋಡುತ್ತಿದೆ ಎಂದು ಡಬ್ಲ್ಯುಟಿಒ ತಿಳಿಸಿದೆ.

ಭಾರತದ ಮೂರು ನಿರ್ದಿಷ್ಟ ಕಾರ್ಯಕ್ರಮಗಳನ್ನು ತನ್ನ ದೂರಿನಲ್ಲಿ ಚೀನಾ ಉಲ್ಲೇಖಿಸಿದೆ. ಪಿಎಲ್​ಐ, ನ್ಯಾಷನಲ್ ಪೋ›ಗ್ರಾಂ ಆನ್ ಅಡ್ವಾನ್ಸ್​ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿ ಸ್ಟೋರೇಜ್; ಆಟೋಮೊಬೈಲ್ ಮತ್ತು ಆಟೋ ಕಾಂಪೊನೆಂಟ್ ಇಂಡಸ್ಟ್ರಿಗಾಗಿ ರೂಪಿಸಿರುವ ಪಿಎಲ್​ಐ ಯೋಜನೆ; ಭಾರತದಲ್ಲಿ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳ ತಯಾರಿಕೆಯನ್ನು ಉತ್ತೇಜಿಸುವ ಯೋಜನೆ. ಸಮಾಲೋಚನೆಗೆ ಮನವಿ ಮಾಡುವುದು ಡಬ್ಲ್ಯುಟಿಒ ನಿಯಮಗಳ ಪ್ರಕಾರ ವಿವಾದ ಪರಿಹಾರ ಪ್ರಕ್ರಿಯೆಯ ಮೊದಲ ಹಂತ. ಅದು ಫಲ ನೀಡದಿದ್ದರೆ, ಪರಿಣಿತರ ಪ್ಯಾನೆಲ್ ರೂಪಿಸುವಂತೆ ಕೋರಲು ಚೀನಾಕ್ಕೆ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net