ಮೃತ ಯೋಧರಿಗೆ ಚೀನಾ ಅಗೌರವ!

China
Published on

ವಾಷಿಂಗ್ಟನ್: ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಯೋಧರ ಸಾವು-ನೋವಿನ ಸಂಖ್ಯೆ ಮುಚ್ಚಿಹಾಕಲು ಚೀನಾ ಸರ್ಕಾರ ಮೃತ ಯೋಧರ ಅಂತಿಮ ಕ್ರಿಯೆಗೂ ಕಠಿಣ ನಿರ್ಬಂಧಗಳನ್ನು ಹೇರಿತ್ತು ಎಂದು ಅಮೆರಿಕದ ಬೇಹುಗಾರಿಕಾ ಮೂಲಗಳು ಹೇಳಿವೆ.

ಹುತಾತ್ಮ ಯೋಧರ ಅಂತ್ಯಕ್ರಿಯೆಯನ್ನು ಸಾರ್ವಜನಿಕವಾಗಿ ನಡೆಸಿದರೆ ಇದರಿಂದ ಎಷ್ಟು ಯೋಧರು ಮೃತರಾಗಿದ್ದಾರೆ ಎಂಬುದು ಬಹಿರಂಗವಾಗುತ್ತದೆ ಎಂಬ ಕಾರಣಕ್ಕೆ ಯೋಧರ ಶವದ ಅಂತಿಮ ಯಾತ್ರೆ ನಡೆಸದಂತೆ, ಅಂತ್ಯಕ್ರಿಯೆಯಲ್ಲಿ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗದಂತೆ, ಶವ ಹೂಳಿದ ಗುಂಡಿಯ ಮೇಲೆ ಸಾಂಪ್ರದಾಯಿಕವಾಗಿ ಸಮಾಧಿ ನಿರ್ವಿುಸದಂತೆ, ಅಂತ್ಯಕ್ರಿಯೆಯನ್ನು ಗ್ರಾಮೀಣ ಭಾಗದ ನಿರ್ಜನ ಪ್ರದೇಶದಲ್ಲಿ ನಡೆಸುವಂತೆ ಚೀನಾದ ನಾಗರಿಕ ವ್ಯವಹಾರ ಸಚಿವಾಲಯ ಆದೇಶ ಹೊರಡಿಸಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ವರದಿ ಮಾಡಿದೆ. ಗಲ್ವಾನ್ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮ ರಾಗಿದ್ದು, 74 ಯೋಧರು ಗಾಯಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮತ್ತು ಸೇನೆ ತಿಳಿಸಿವೆ. ಆದರೆ, ಚೀನಾ ಸರ್ಕಾರ ಮಾತ್ರ ಸಾವನ್ನಪ್ಪಿದ ಮತ್ತು ಗಾಯಗೊಂಡ ಯೋಧರ ನಿಖರ ಸಂಖ್ಯೆ ತಿಳಿಸಿಲ್ಲ. ಭಾರತದಲ್ಲಿ ಸಕಲ ಗೌರವ ಮೂಲಕ ಯೋಧರ ಅಂತ್ಯಕ್ರಿಯೆ ನಡೆಸಲಾಗಿದೆ. ಅವರ ಕುಟುಂಬದವರನ್ನು ಭೇಟಿಯಾದ ಸರ್ಕಾರದ ಪ್ರತಿನಿಧಿಗಳು ಸಾಂತ್ವನ ಹೇಳಿ, ಪರಿಹಾರ ಒದಗಿಸಿದ್ದಾರೆ. ನಮ್ಮಲ್ಲಿ ಇದ್ಯಾವುದೂ ಆಗಿಲ್ಲ ಎಂದು ಚೀನಾ ಯೋಧರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್್ಸ ಸ್ಪಷ್ಟನೆ ನೀಡಿತ್ತು. ಭಾರತಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸಾವು-ನೋವು ಉಂಟಾಗಿದೆ. ಮೃತ ಯೋಧರಿಗೆ ದೊರೆಯಬೇಕಾದ ಎಲ್ಲ ಗೌರವಗಳು ದೊರೆಯುತ್ತವೆ ಎಂದು ಹೇಳಿತ್ತು.

ನಾಲ್ಕನೇ ಸುತ್ತಿನ ಸಭೆ ಆರಂಭ

ಘರ್ಷಣೆಗೆ ಕಾರಣವಾಗಿದ್ದ ಗಲ್ವಾನ್ ಕಣಿವೆ, ಪ್ಯಾಂಗೊಂಗ್ ತ್ಸೊ ಸರೋವರ ಇನ್ನಿತರ ಕಡೆಗಳಿಂದ ಚೀನಾ ಸೇನೆ ಹಿಂಪಡೆಯುವಿಕೆ ಸಾಗಿರುವ ಬೆನ್ನಿಗೆ ಭಾರತ-ಚೀನಾ ಸೇನೆಗಳ ಕಮಾಂಡರ್ ಮಟ್ಟದ ನಾಲ್ಕನೇ ಸುತ್ತಿನ ಸಭೆ ಪೂರ್ವ ಲಡಾಖ್​ನ ಎಲ್​ಎಸಿ ಬಳಿಯ ಚುಶುಲ್​ನಲ್ಲಿ ಮಂಗಳವಾರ ಆರಂಭವಾಗಿದೆ. ಸೇನೆ ವಾಪಸಾತಿಯ ಎರಡನೇ ಹಂತದ ಕುರಿತು ಮಹತ್ವದ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಜುಲೈ 5ರಂದು ನಡೆದ ಮಾತುಕತೆ ನಂತರ ನಡೆಯುತ್ತಿರುವ ಸೇನಾಧಿಕಾರಿಗಳ ಮೊದಲ ಸಭೆ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net