ತಿಳಿಗೊಳ್ಳಲಿ ಗಡಿ ಬಿಕ್ಕಟ್ಟು: ಭಾರತಕ್ಕೆ ಭೇಟಿ ನೀಡಲಿದ್ದಾರೆ ಚೀನಾದ ರಕ್ಷಣಾ ಸಚಿವ

Army (2)
Published on

ಪೂರ್ವ ಲಡಾಖ್​ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್​ಎಸಿ) ಭದ್ರತೆ- ಸ್ಥಿರತೆ ಕಾಯ್ದುಕೊಳ್ಳಲು; ನಿಕಟ ಸಂಪರ್ಕದಲ್ಲಿದ್ದುಕೊಂಡು ಮಿಲಿಟರಿ- ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ಮುಂದುವರಿಸಲು ಮತ್ತು ಉಳಿದುಕೊಂಡಿರುವ ಸಮಸ್ಯೆಗಳ ಕುರಿತಂತೆ ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ರೂಪಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.

ವಾಸ್ತವ ನಿಯಂತ್ರಣ ರೇಖೆಯ (ಎಲ್​ಎಸಿ) ಬಳಿ ಚೀನಾದ ಬದಿಯಲ್ಲಿರುವ ಚುಶುಲ್-ಮೊಲ್ಡೊದಲ್ಲಿ ಜರುಗಿದ 18ನೇ ಸುತ್ತಿನ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಸಂದರ್ಭದಲ್ಲಿ ಈ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದಲ್ಲದೆ, ನವದೆಹಲಿಯಲ್ಲಿ ಏಪ್ರಿಲ್ 27 ಮತ್ತು 28 ರಂದು ನಡೆಯಲಿರುವ ಶಾಂಘೖ ಸಹಕಾರ ಸಂಸ್ಥೆ (ಎಸ್​ಸಿಒ) ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಚೀನಾದ ರಕ್ಷಣಾ ಸಚಿವರು ಪಾಲ್ಗೊಳ್ಳಲು ಮುಂದಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಭಾರತ- ಚೀನಾ ಗಡಿಯಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವ ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸಲು ಸಹಕಾರಿಯಾಗುವ ನಿರೀಕ್ಷೆಗಳು ಗರಿಗೆದರಿವೆ.

1962ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ್ದ ಚೀನಾ ಲಡಾಖ್ ಭಾಗದಲ್ಲಿನ ಒಂದಿಷ್ಟು ಪ್ರದೇಶವನ್ನು ಅತಿಕ್ರಮಿಸಿದೆ. ಅಲ್ಲದೆ, ಮೆಕ್ ಮಹೊನ್ ಗಡಿ ರೇಖೆಯನ್ನು ಭಾರತ- ಚೀನಾ ಗಡಿ ಎಂದು ಒಪ್ಪಿಕೊಳ್ಳುವುದಿಲ್ಲ. 2020ರ ಜೂನ್ 15ರಂದು ಲಡಾಖ್​ನ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಹಲ್ಲೆ ನಡೆಸಿದ್ದರಿಂದಾಗಿ ಭಾರತದ 20 ಸೈನಿಕರು ಸಾವನ್ನಪ್ಪಿದ್ದರು. ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದರಿಂದ ತನ್ನ 6 ಸೈನಿಕರು ಅಸು ನೀಗಿದ್ದಾರೆ ಎಂದು ಚೀನಾ ತಡವಾಗಿ ಒಪ್ಪಿಕೊಂಡಿತ್ತು. 2022ರ ಡಿಸೆಂಬರ್ 9ರಂದು ಅರುಣಾಚಲ ಪ್ರದೇಶ ರಾಜ್ಯದ ತವಾಂಗ್​ನಲ್ಲಿ ಎಲ್​ಎಸಿ ದಾಟಿ ನುಗ್ಗಲು ಚೀನಾ ಸೈನಿಕರು ಪ್ರಯತ್ನಿಸಿದ್ದನ್ನು ಭಾರತೀಯ ಸೈನಿಕರು ತಡೆದಿದ್ದರು.

ತಂಟೆಕೋರ ಚೀನಾದ ಇಂತಹ ನಡೆಗಳಿಂದಾಗಿ ಭಾರತ- ಚೀನಾ ಗಡಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಉದ್ವಿಗ್ನತೆ ನೆಲೆಸಿದೆ. ಲಡಾಖ್ ಪ್ರದೇಶದಲ್ಲಿ ಎಲ್​ಎಸಿಗುಂಟ ಭಾರತ ಮತ್ತು ಚೀನಾದಿಂದ ತಲಾ 60,000ಕ್ಕೂ ಹೆಚ್ಚು ಸೈನಿಕರು ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ನಿಯೋಜನೆ ಮುಂದುವರಿದಿದೆ. ಭಾರತವು ಕೆಲ ದಿನಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಜಿ 20 ಸಭೆ ನಡೆಸಿದ ಒಂದು ವಾರದ ನಂತರ ಅಲ್ಲಿನ 11 ಸ್ಥಳಗಳನ್ನು ಮರುನಾಮಕರಣ ಮಾಡುವ ಉದ್ಧಟತನವನ್ನು ಚೀನಾ ತೋರಿದರೂ ಭಾರತವು ರಾಜತಾಂತ್ರಿಕ ರೀತಿಯಲ್ಲಿ ಇದನ್ನು ತಿರಸ್ಕರಿಸಿತು.

ಈಗ ಶಾಂಘೖ ಸಹಕಾರ ಸಂಸ್ಥೆ (ಎಸ್​ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾದ ರಕ್ಷಣಾ ಸಚಿವ ಲಿ ಶಾಂಗ್​ಫು ಭಾರತಕ್ಕೆ ತಮ್ಮ ಚೊಚ್ಚಲ ಭೇಟಿ ನೀಡಲಿರುವುದು ಉಭಯ ದೇಶಗಳ ಗಡಿ ಬಿಕ್ಕಟ್ಟು ತಿಳಿಗೊಳ್ಳುವ ನಿಟ್ಟಿನಲ್ಲಿ ಒಂದಿಷ್ಟು ನಿರೀಕ್ಷೆ ಮೂಡಿಸಿದೆ. ಭಾರತ ಹಾಗೂ ಚೀನಾ ದೇಶಗಳು ಜಗತ್ತಿನಲ್ಲಿಯೇ ಅತಿಹೆಚ್ಚು ಆರ್ಥಿಕ ಪ್ರಗತಿ ಸಾಧಿಸುತ್ತಿರುವ ರಾಷ್ಟ್ರಗಳಾಗಿವೆ. ಒಟ್ಟಾರೆ ಜಗತ್ತಿನ ಆರ್ಥಿಕ ಬೆಳವಣಿಗೆಗೆ ಶೇ. 50ಕ್ಕಿಂತಲೂ ಕೊಡುಗೆಯನ್ನು ಇವು ನೀಡಲಿವೆ ಎಂದು ವಿಶ್ವ ಸಂಸ್ಥೆಯೇ ಅಂದಾಜಿಸಿದೆ. ಚೀನಾ ತನ್ನ ವಿಸ್ತರಣಾವಾದಿ ಧೋರಣೆಯನ್ನು ತ್ಯಜಿಸಿ ಮೆಕ್ ಮೆಹೂನ್ ಗಡಿ ರೇಖೆಯನ್ನು ಒಪ್ಪಿಕೊಂಡರೆ, ಗಡಿ ಬಿಕ್ಕಟ್ಟು ನಿವಾರಣೆಯಾಗಿ ಉಭಯ ದೇಶಗಳು ಇನ್ನಷ್ಟು ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net