ಪರೋಕ್ಷ ಪ್ರಹಾರ; ನಿಷೇಧವಾಗಿದ್ದರೂ ಚೀನಾ ಆ್ಯಪ್​ಗಳ ಅಬ್ಬರ

Editorial
Published on

ಪೂರ್ವ ಲಡಾಖ್ ಗಡಿಯಲ್ಲಿ ಉದ್ಧಟತನ ತೋರಿದ ಚೀನಾದ ವಿರುದ್ಧ ಭಾರತ ಬೇರೆ ಬೇರೆ ಬಗೆಯಲ್ಲಿ ಪ್ರತೀಕಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದು ಗೊತ್ತೇ ಇದೆ. ಸೇನೆ ನಿಯೋಜನೆಯಲ್ಲಿ ಆಕ್ರಮಕ ತಂತ್ರಗಾರಿಕೆ, ರಾಜತಾಂತ್ರಿಕ ಮಾರ್ಗದ ಬಳಕೆ, ವ್ಯಾಪಾರ ವ್ಯವಹಾರದಲ್ಲಿ ಎದಿರೇಟು... ಈ ಮುಂತಾದ ಕ್ರಮಗಳು ಇದರಲ್ಲಿ ಸೇರಿದ್ದವು. ಭಾರತದಲ್ಲಿ ಭರ್ಜರಿ ವ್ಯವಹಾರ ನಡೆಸುತ್ತಿದ್ದ ಚೀನಾ ಮೂಲದ ಕೆಲವು ಆಪ್​ಗಳನ್ನು ನಿಷೇಧಿಸುವುದು ಈ ಕಾರ್ಯತಂತ್ರದ ಭಾಗವಾಗಿತ್ತು. ಈ ಪೈಕಿ ಕೆಲವು ಆಪ್​ಗಳು ಗ್ರಾಹಕರ ವೈಯಕ್ತಿಕ ಮಾಹಿತಿಯನ್ನೂ ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಶಂಕೆಯೂ ವ್ಯಕ್ತವಾಗಿತ್ತು. ಹೀಗಾಗಿ ದೇಶದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಐಟಿ ಕಾಯ್ದೆ 69ಎ ಸೆಕ್ಷನ್ ಅಡಿಯಲ್ಲಿ ಚೀನಾದ 267 ಆಪ್​ಗಳನ್ನು ನಿಷೇಧಿಸುವ ಆದೇಶ ಹೊರಡಿಸಿತು. ಚೀನಾ ಈ ಕ್ರಮವನ್ನು ವಿರೋಧಿಸಿದರೂ ಭಾರತ ಹೆಜ್ಜೆ ಹಿಂದಿಡಲಿಲ್ಲ. ಆರಂಭದಲ್ಲಿ ಈ ನಿಷೇಧ ಪರಿಣಾಮಕಾರಿ ಎಂಬಂತೆ ಕಂಡರೂ, ಈಗ ಮತ್ತೆ ಕ್ರಮೇಣ ಚೀನಾ ಆಪ್​ಗಳ ಹಾವಳಿ ಹೆಚ್ಚಿದೆ ಎಂದು ವರದಿಗಳು ತಿಳಿಸುತ್ತವೆ. ಆದರೆ ಈಗ ಅವುಗಳ ಕಾರ್ಯತಂತ್ರ ಬದಲಾಗಿದ್ದು, ಮೂಲ ಕಂಪನಿಯ ಹೆಸರು ಮರೆಮಾಚಿ ಅಥವಾ ಸರಿಯಾಗಿ ಮಾಹಿತಿ ನೀಡದೆ, ಹೊಸ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ ಹೆಚ್ಚಿನವು ಮಾಧ್ಯಮ ಮತ್ತು ಮನರಂಜನೆಗೆ ಸಂಬಂಧಿಸಿದವಾಗಿದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಹೊಂದಬಹುದು ಎಂಬುದು ಅವುಗಳ ಲೆಕ್ಕಾಚಾರ ಎನ್ನಲಾಗಿದೆ.

ಚೀನಾ ಮೂಲದ ಪ್ಲೇ ಇಟ್ ಆಪ್ ಸದ್ಯ ಭಾರತದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದುತ್ತಿದೆ ಎಂದು ಮಾಹಿತಿ ಇದೆ. ಜಗತ್ತಿನ ಪ್ರಮುಖ ಮೊಬೈಲ್ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದ್ದು, ಬಹುತೇಕ ಎಲ್ಲರ ಕೈಲೂ ಮೊಬೈಲ್ ಇರುತ್ತದೆ. ಹೀಗಾಗಿ ಅವರವರ ಆಸಕ್ತಿಗೆ ತಕ್ಕಂತೆ ಆಪ್​ಗಳ ಡೌನ್​ಲೋಡ್ ಸಹ ಭಾರಿ ಪ್ರಮಾಣದಲ್ಲಿ ಆಗುತ್ತದೆ. ಆದರೆ ಹೀಗೆ ಮಾಡುವಾಗ ಹೆಚ್ಚಿನವರು ಆಪ್​ಗಳ ಮೂಲದ ಬಗ್ಗೆಯಾಗಲಿ ಅಥವಾ ವ್ಯಕ್ತಿಗತ ಮಾಹಿತಿಯ ಸುರಕ್ಷತೆ ಬಗ್ಗೆೆಯಾಗಲಿ ಹೆಚ್ಚು ಗಮನ ನೀಡಲು ಹೋಗುವುದಿಲ್ಲ. ಆಪ್ ಕಂಪನಿಗಳು ಇದನ್ನು ತಮ್ಮ ಬೆಳವಣಿಗೆಗೆ ಅವಕಾಶವಾಗಿ ಬಳಸಿಕೊಳ್ಳುತ್ತವೆ. ಈಗ ಚೀನಾ ಕಂಪನಿಗಳು ಮತ್ತೆ ಭಾರತದಲ್ಲಿ ಆಪ್​ಗಳನ್ನು ನಡೆಸುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೂಲಂಕಷವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ. ಇಲ್ಲವಾದಲ್ಲಿ ನಿಷೇಧದ ಉದ್ದೇಶ ಈಡೇರುವುದಿಲ್ಲ ಮತ್ತು ಭಾರತದಲ್ಲಿ ಸರ್ಕಾರಗಳ ಕಣ್ಗಾವಲು ವ್ಯವಸ್ಥೆ ಇಷ್ಟೇ ಎಂಬ ಅನಿಸಿಕೆ ಚೀನಾ ಕಂಪನಿಗಳಿಗೆ ಮೂಡಬಹುದು. ಜತೆಗೆ, ಸುರಕ್ಷತೆಯ ಪ್ರಶ್ನೆ ಸಹ ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ಜನರು ಕೂಡ ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಇನ್ನೊಂದೆಡೆ, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಚೀನಾ ತನ್ನ ಭಾರತವಿರೋಧಿ ಕಾರ್ಯಕ್ಕೆ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಪಾಕ್ ಕೂಡ ಅದರ ಜತೆ ಕೈಜೋಡಿಸುವುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಚೀನಾದ ಪ್ರತಿನಡೆಯನ್ನೂ ಕಟ್ಟೆಚ್ಚರದಿಂದ ಗಮನಿಸುವುದು ಅನಿವಾರ್ಯ. ಸರ್ಕಾರದ ಜತೆಗೆ ಜನರು ಸಹ ತಮ್ಮದೇ ನೆಲೆಯಲ್ಲಿ ಈ ನಿಟ್ಟಿನಲ್ಲಿ ಸಹಕರಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net