

ಬೀಜಿಂಗ್: ಚೀನಾದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 400ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.
ವಾಯುವ್ಯ ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿ ರಿಕ್ಟಾರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 116 ಮಂದಿ ಸಾವನ್ನಪ್ಪಿದ್ದಾರೆ. ಸಾವು-ನೋವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಭೂಕಂಪ ಕೇಂದ್ರಬಿಂದುವು ಗನ್ಸು ಪ್ರಾಂತ್ಯದ ರಾಜಧಾನಿ ಲ್ಯಾನ್ಝೌದಿಂದ ಸುಮಾರು 100 ಕಿಲೋಮೀಟರ್ ನೈಋತ್ಯದಲ್ಲಿದೆ. ಭೂಕಂಪ ಸಂಭವಿಸಿದಾಗ ಜನರು ಗಾಢ ನಿದ್ರೆಯಲ್ಲಿದ್ದು, ಎಚ್ಚರಗೊಳ್ಳುವ ಮುನ್ನವೇ ಕುಸಿದ ಮನೆಗಳ ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಗನ್ಸು ಪ್ರಾಂತ್ಯದಲ್ಲಿ 105 ಮಂದಿ ಮತ್ತು ನೆರೆಯ ಕಿಂಗ್ಹೈ ಪ್ರಾಂತ್ಯದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಕಿಂಗ್ಹೈ ಪ್ರಾಂತ್ಯದ ಹೈಡಾಂಗ್ ನಗರದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು 100 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಭೂಕಂಪದಿಂದಾಗಿ 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಭೂಕಂಪಪೀಡಿತ ಪ್ರದೇಶದಲ್ಲಿ ನೂರಾರು ಮನೆಗಳು ನೆಲಸಮಗೊಂಡಿವೆ. ಜನರಲ್ಲಿ ಇನ್ನೂ ಆತಂಕ ಮನೆಮಾಡಿದ್ದು, ಬೀದಿಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆ ಕ್ಸಿನ್ಹುವಾ ಹೇಳಿದೆ.
ರಸ್ತೆಗಳು ಮತ್ತು ಕಟ್ಟಡಗಳಿಗೆ ಭಾರೀ ಹಾನಿಯಾಗಿದ್ದು, ವಿದ್ಯುತ್ ಮತ್ತು ಸಂಪರ್ಕ ಮಾರ್ಗಗಳು ಸ್ಥಗಿತಗೊಂಡಿವೆ. ಮಂಗಳವಾರ ಮುಂಜಾನೆಯಿಂದಲೇ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಬದುಕುಳಿದವರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ತಿಳಿಸಿದ್ದಾರೆ.
ಚೀನಾದಲ್ಲಿ ಭೂಕಂಪಗಳು ಸಾಮಾನ್ಯ. ಕಳೆದ ಆಗಸ್ಟ್ನಲ್ಲಿ ಪೂರ್ವ ಚೀನಾದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸೆಪ್ಟೆಂಬರ್ 2022 ರಲ್ಲಿ ಸಿಚುವಾನ್ ಪ್ರಾಂತ್ಯದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿ 100 ಜನರನ್ನು ಬಲಿ ತೆಗೆದುಕೊಂಡಿತ್ತು. 2008 ರಲ್ಲಿ 7.9 ತೀವ್ರತೆಯ ಭೂಕಂಪವು 5,335 ಶಾಲಾ ಮಕ್ಕಳು ಸೇರಿದಂತೆ 87,000 ಕ್ಕೂ ಹೆಚ್ಚು ಜನರನ್ನು ಬಲಿಪಡೆದಿತ್ತು.