ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ

17 KRN-1
ಕೆ.ಆರ್.ನಗರದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಸಿ.ಎಸ್.ಪೂರ್ಣಿಮಾ, ಡಾ.ಜಯಣ್ಣ, ಆರ್.ಕೃಷ್ಣಪ್ಪ ಇದ್ದರು.
Published on

ಕೆ.ಆರ್.ನಗರ: ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆ ಅಡಗಿದ್ದು, ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡಿದಾಗ ವಿದ್ಯಾರ್ಥಿಗಳು ಎಲ್ಲ ರಂಗದಲ್ಲೂ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಹೊರವಲಯದ ಕಾಳೇನಹಳ್ಳಿ ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುವ ಮೂಲಕ ಎಲ್ಲ ರೀತಿಯ ಬೆಳವಣಿಗೆಗೆ ಕಾರಣಕರ್ತರಾಗಬೇಕು ಎಂದರು.

ಬಾಲ್ಯದಲ್ಲಿಯೇ ಪ್ರತಿಭೆ ಗುರುತಿಸಬೇಕೆಂಬ ಕಾರಣಕ್ಕಾಗಿ ಸರ್ಕಾರ ಪ್ರತಿಭಾ ಕಾರಂಜಿಯಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ಆ ಮೂಲಕ ತಾಲೂಕು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.

ಡಾ.ರಾಜ್‌ಕುಮಾರ್ ಅವರು ಶಿಕ್ಷಣ ಪಡೆಯದಿದ್ದರೂ ಅವರ ಪ್ರತಿಭೆಯಿಂದ ಕನ್ನಡದ ಮೇರು ನಟನಾಗಿ ಖ್ಯಾತಿ ಪಡೆದರು. ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಬಹಳ ಪ್ರಮುಖವಾದದ್ದು. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ತಾಲೂಕು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 203ನೇ ಸ್ಥಾನದಲ್ಲಿದ್ದು, ಇದು ತಲೆತಗ್ಗಿಸುವ ವಿಚಾರ. ಆದ್ದರಿಂದ ಶಿಕ್ಷಕ ವೃಂದ ಪರಿಣಾಮಕಾರಿಯಾಗಿ ಬೋಧನೆ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡಬೇಕು. ಇದಕ್ಕೆ ಅಗತ್ಯವಿರುವ ಅನುಕೂಲ ಮತ್ತು ಪ್ರೋತ್ಸಾಹ ನೀಡಲು ಸಿದ್ಧ ಎಂದರು.
ಕಾಳೇನಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯ ಕೆ.ಪಿ.ಜಗದೀಶ್ ಅವರು ನರೇಗಾ ಯೋಜನೆಯಡಿ ಆದರ್ಶ ಶಾಲೆಗೆ ಉದ್ಯಾನ ಮತ್ತು ಕಾಂಪೌಂಡ್ ನಿರ್ಮಿಸಿದ್ದಾರೆ. ಅಲ್ಲದೆ ಶಾಲೆ ಮುಂಭಾಗ ಇರುವ ಕೆರೆಯನ್ನು ಸ್ವಚ್ಛಗೊಳಿಸಿ ವಾಯು ವಿಹಾರ ಮಾಡುವವರಿಗೆ ಅನುಕೂಲ ಕಲ್ಪಿಸಿದ್ದಾರೆ. ಇದರಿಂದ ಶಾಲೆಯ ಸೌಂದರ್ಯ ಹೆಚ್ಚಾಗಿದೆ. ಅದಕ್ಕಾಗಿ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಮುಖ್ಯಾಧಿಕಾರಿ ಡಾ.ಜಯಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀರೇವಣ್ಣ, ಸದಸ್ಯರಾದ ಸುನೀತಾ, ಕೆ.ಪಿ.ಜಗದೀಶ್, ಬಿಇಒ ಆರ್.ಕೃಷ್ಣಪ್ಪ, ಶಿಕ್ಷಣ ಸಂಯೋಜಕರಾದ ದಾಸಪ್ಪ, ಭರತೇಶ್, ಸಿಆರ್‌ಪಿ ವಸಂತಕುಮಾರ್, ಆದರ್ಶ ಶಾಲೆ ಮುಖ್ಯಶಿಕ್ಷಕಿ ರುಕ್ಮಿಣಿ, ಎಸ್‌ಡಿಎಂಸಿ ಅಧ್ಯಕ್ಷ ಧರ್ಮರಾಜ್, ಸದಸ್ಯ ದೊಡ್ಡಕೊಪ್ಪಲುರವಿ, ಸಿಆರ್‌ಪಿ ವಸಂತ್‌ಕುಮಾರ್, ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಎನ್.ಕುಮಾರೇಗೌಡ, ಶಿಕ್ಷಕರಾದ ರಶ್ಮಿ ಮಂಜುನಾಥ್, ರಿಜ್ವಾನ್, ಕೆ.ಪಿ.ಭಾರತಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net