

ಶಿವಮೊಗ್ಗ: ನಗರದ ಕೆ.ಆರ್.ಪುರಂನ ದೊಡ್ಡಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧ ಸರ್ಕಾರಿ ಶಾಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳ ಓದು, ಬರಹ, ಗಣಿತ ಲೆಕ್ಕಗಳನ್ನು ಬಿಡಿಸುವ ಕೌಶಲಗಳನ್ನು ಪ್ರದರ್ಶಿಸಲಾಯಿತು. ಓದು, ಬರಹ, ಗಣಿತ ಕೌಶಲಗಳನ್ನು ಪ್ರದರ್ಶಿಸುವ ಸಲುವಾಗಿ ಮೀಸಲಿದ್ದ ವಿನೂತನ ಕಾರ್ಯಕ್ರಮ ಇದಾಗಿತ್ತು. ಹಿರಿಯರು ಹೇಳಿದ ಕಥೆಗಳನ್ನು ನೆನಪಿಟ್ಟುಕೊಂಡು ಹಾವಭಾವಗಳೊಂದಿಗೆ ಕಥೆ ಹೇಳುವ ಸ್ಪರ್ಧೆ, ಗಣಿತ ಕಲಿಕೆ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ನೆನಪಿನ ಶಕ್ತಿ ಪರೀಕ್ಷಿಸಲು ಮೆಮರಿ ಹಂಟ್, ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಪಾಲಕರು ವಿದ್ಯಾರ್ಥಿಗಳ ಜತೆಗೆ ಬೆರೆತು ಕಥೆಯನ್ನು ಕಟ್ಟಿ ಅಭಿನಯದ ಮೂಲಕ ಹೇಳಿ ಪಾಲಕರು ಮತ್ತು ಮಕ್ಕಳ ಸಂಬಂಧಕ್ಕೆ ಹೊಸ ಭಾಷ್ಯ ಬರೆದರು. ಚಿಣ್ಣರೆಲ್ಲರಿಗೂ ವಿಶೇಷ ಬಹುಮಾನ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಬಿಇಒ ರಮೇಶ್ ಮಾತನಾಡಿ, ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳ ಎಫ್‌ಎಲ್ ಕಲಿಕೆಯ ಪ್ರದರ್ಶನಕ್ಕೆ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದರು. ಮುಖ್ಯಶಿಕ್ಷಕಿ ರೇಣುಕಮ್ಮ, ಶಿಕ್ಷಕಿ ಶಶಿರೇಖಾ ಜಿ. ಭಟ್, ಬಿಆರ್‌ಪಿ ಧನಂಜಯ್ ಉಪಸ್ಥಿತರಿದ್ದರು.