ಆಗ ತಾನೇ ಜನಿಸಿದ ಹಸುಗೂಸುಗಳ ಸರಣಿ ಹತ್ಯೆ: ಮಕ್ಕಳ ನರ್ಸ್​ ಬಂಧನ ಹಿಂದಿದೆ ಭಾರೀ ನಿಗೂಢ..!

Children
Published on

ಲಂಡನ್​: ಆಗ ತಾನೇ ಜನಿಸಿದ ಎಂಟು ಮಕ್ಕಳನ್ನು ಕೊಲೆ ಮಾಡಿದ ಆರೋಪದಲ್ಲಿ ಮಕ್ಕಳ ನರ್ಸ್​ ಅನ್ನು ಬಂಧಿಸಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ನರ್ಸ್​ ಮಕ್ಕಳನ್ನು ಕೊಂದಿದ್ದಲ್ಲದೆ ಸುಮಾರು 10 ಮಕ್ಕಳ ಹತ್ಯೆಗೆ ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಯನ್ನು ಲೂಸಿ ಲೆಟ್ಬಿ (30) ಎಂದು ಗುರುತಿಸಲಾಗಿದೆ. 2015 ಮತ್ತು 2016ರ ನಡುವೆ ಇಂಗ್ಲೆಂಡ್​ನ ಚೆಷೈರ್​ನಲ್ಲಿರುವ ಕೌಂಟೆಸ್​ ಆಫ್​ ಚೆಸ್ಟರ್​ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸರಣಿ ಕೊಲೆಗೆ ಸಂಬಂಧಿಸಿದ ತನಿಖಾ ವೇಳೆ ನರ್ಸ್​ ಲೂಸಿ ಪಾತ್ರವಿರುವುದು ತಿಳಿದುಬಂದಿದೆ ಎಂದು ಚೆಷೈರ್ ಪೊಲೀಸರು ಮಾಹಿತಿ ನೀಡಿದ್ದಾರೆ.

2018ರಲ್ಲೇ ಮೊದಲ ಬಾರಿಗೆ ಲೂಸಿಯನ್ನು ವಶಕ್ಕೆ ಪಡೆಯಲಾಗಿತ್ತು. ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಲಾಗಿತ್ತು. ನಂತರ ಜಾಮೀನಿನ ಮೂಲಕ ಹೊರಬಂದಿದ್ದಳು. ಚೆಷ್ಟರ್​ ಯೂನಿವರ್ಸಿಟಿಯ ಪದವೀಧರೆಯಾಗಿರುವ ಲೂಸಿ 3 ಮಿಲಿಯನ್​ ಪೌಂಡ್​ ನಿಧಿ ಸಂಗ್ರಹ ಅಭಿಯಾನದಲ್ಲೂ ತೊಡಗಿಕೊಂಡಿದ್ದಳು ಮತ್ತು ಲಿವರ್​ಪೂಲ್​ ಮಹಿಳಾ ಆಸ್ಪತ್ರೆಯಲ್ಲೂ ಕೆಲಸ ಮಾಡಿರುವ ಲೂಸಿಯನ್ನು ಕೆಲವೊಂದು ಆರೋಪಗಳ ಮೇಲೆ 2019ರಲ್ಲಿ ಮತ್ತೊಮ್ಮೆ ಬಂಧಿಸಲಾಗಿತ್ತು. ಇದೀಗ ಮಕ್ಕಳ ಕೊಲೆ ಆರೋಪಸಲ್ಲಿ ಇದೇ ವಾರದ ಆರಂಭದಲ್ಲಿ ಬಂಧಿಸಲಾಗಿದೆ.

2015 ಮಾರ್ಚ್ ಮತ್ತು 2016 ಜುಲೈ ತಿಂಗಳ ನಡುವೆ ಮಕ್ಕಳ ಸರಣಿ ಹತ್ಯೆಯಿಂದ ಆತಂಕಗೊಂಡ ಆಸ್ಪತ್ರೆ ಆಡಳಿತ ಮಂಡಳಿ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಲೂಸಿಯನ್ನು ಬಂಧಿಸಿದ್ದಾರೆ. ಸದ್ಯ ಆಕೆಯ ವಿಚಾರಣೆಯನ್ನು ನಡೆಸಲಾಗುತ್ತಿದೆ.

ಇನ್ನು ಅಕಾಲಿಕ ಶಿಶುಗಳು ಹೃದಯ ಮತ್ತು ಶ್ವಾಸಕೋಶ ವೈಫಲ್ಯದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಮಕ್ಕಳ ಮರಣದ ನಂತರ ಅವರ ತೋಳುಗಳ ಮೇಲೆ ಅಸಾಮಾನ್ಯ ಮಚ್ಚೆಗಳು ಸಹ ಇದ್ದವು ಎಂದು ತಜ್ಞರ ತಂಡ ತಿಳಿಸಿದೆ.

ಸದ್ಯ ಲೂಸಿ ಬಂಧನದಿಂದ ಶಾಕ್​ ಆಗಿರುವ ಫ್ರೆಂಡ್ಸ್​ ಮತ್ತು ಪಾಲಕರು ಲೂಸಿ ಓರ್ವ ಸಹೃದಯಿ ಮತ್ತು ಅಮಾಯಕಿ ಎಂದು ಹೇಳಿದ್ದಾರೆ. ಅಲ್ಲದೆ, ತನ್ನ ವೃತ್ತಿಯನ್ನು ತುಂಬಾ ಗೌರವಿಸುತ್ತಿದ್ದಳು ಎಂದು ತಿಳಿಸಿದ್ದಾರೆ. ಆಸ್ಪತ್ರೆಯವರು ಕೂಡ ಆರೋಪವನ್ನು ಅಲ್ಲಗೆಳೆದಿದ್ದಾರೆ. ಮಕ್ಕಳ ಸಾವಿನ ಕಾರಣ ಮಾತ್ರ ನಿಗೂಡವಾಗಿಯೇ ಉಳಿದಿದ್ದು, ಲೂಸಿಯವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net