ಹನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆ

2hanagodu2..
Published on

ಹನಗೋಡು: ಪಾನಿಪುರಿ, ಚುರುಮುರಿ, ತಾಜಾ ತರಕಾರಿ, ಹಣ್ಣು ಬನ್ನಿ ಸಾರ್.. ಕಡಿಮೆ ಬೆಲೆ ಇಲ್ಲಿ.. ತಗೊಳ್ಳಿ ಸಾರ್…
ಈ ದೃಶ್ಯ ಕಂಡು ಬಂದಿದ್ದು, ಯಾವುದೇ ಸಂತೆ ಮಾರುಕಟ್ಟೆಯಲ್ಲಿ ಅಲ್ಲ. ಹನಗೋಡು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ವಸ್ತು, ತರಕಾರಿ, ತಿನಿಸುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.

ವ್ಯಾವಹಾರಿಕ ಜ್ಞಾನ ಮೂಡಿಸುವ ಸಲುವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಯಾವುದೇ ಅನುಭವಿ ವರ್ತಕನಿಗೆ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ವ್ಯಾಪಾರದಲ್ಲಿ ಮಗ್ನರಾಗಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದರು.

ಮಕ್ಕಳಿಂದ ಪಾನಿಪುರಿ ಹಾಗೂ ಚುರುಮುರಿಯನ್ನು ಖರೀದಿಸುವ ಮೂಲಕ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯ ಶಿಕ್ಷಕ ಇರ್ಷಾದ್ ಅಹಮದ್ ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಇಲಾಖೆಯಿಂದ ಪಠ್ಯೇತರ ಚಟುವಟಿಕೆಯಾಗಿ ಮಕ್ಕಳ ಸಂತೆ ಏರ್ಪಡಿಸಲಾಗಿದೆ. ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವುದರ ಜತೆಗೆ ವ್ಯಾವಹಾರಿಕ ಕ್ರೀಯಾಶೀಲತೆ ಕಲಿಯುತ್ತಾರೆ ಎಂದರು.

ಶಾಲಾಭಿವೃದ್ದಿ ಸಮಿತಿ ಸದಸ್ಯ ಹರೀಶ್, ಶಿಕ್ಷಕಿ ಛಾಯಾಮಣಿ, ಹೊನ್ನಾಚಾರಿ ಆರ್. ಸತೀಶ್ ಕುಮಾರ್, ಪ್ರಸನ್ನ ಕುಮಾರ್, ಜಯಂತಿ, ಭಾನುಮತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net