

ರಾಣೆಬೆನ್ನೂರ: ಜಗತ್ತು ಬಹಳ ವೈಜ್ಞಾನಿಕವಾಗಿ ಮುಂದುವರಿಯುತ್ತಿದೆ. ಆ ಸಂದರ್ಭಕ್ಕೆ ಅನುಗುಣವಾಗಿ ವಿದ್ಯಾಥಿರ್ಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಆಗಬೇಕು. ಅದಕ್ಕೆ ಬಹಳ ಸಾಮರ್ಥ್ಯದ ಸರ್ಕಾರ ಕೂಡ ಬೇಕು. ಅಂದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದ ಸರ್ಕಾರಿ ಶಾಲೆ ಮಕ್ಕಳು ಸುದೈವಿಗಳು. ಇಲ್ಲಿ ಸೌಲಭ್ಯ ಬಹಳಷ್ಟಿವೆ. ಆದರೆ ಉತ್ತರ ಪ್ರದೇಶದ ಸರ್ಕಾರ ತೆಗೆದುಕೊಂಡರೆ ಇಷ್ಟೊಂದು ವ್ಯವಸ್ಥೆ ಇಲ್ಲ. ಈ ಹಿಂದೆ ಶೇ. 50ರಷ್ಟು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಆದರೆ ನಮ್ಮ ರಾಜ್ಯದ ಎಲ್ಲ ಸಿಎಂಗಳು ಪ್ರಾಥಮಿಕ ಶಾಲಾ ಹಂತದ ಮಕ್ಕಳಿಗೆ ಬಹಳಷ್ಟು ಸೌಲಭ್ಯ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ರಾಮಕೃಷ್ಣ ಹೆಗಡೆಯವರಿಗೆ ನಾವು ಧನ್ಯವಾದ ಹೇಳಬೇಕು ಎಂದರು.
ಸರ್ಕಾರ ಸಮವಸ್ತ್ರ, ಬಿಸಿಯೂಟ, ಸೈಕಲ್, ಬಸ್ ಪಾಸ್ ಸೇರಿ ಹಲವು ಸೌಲಭ್ಯ ಕೊಟ್ಟಿದೆ. ಆದ್ದರಿಂದ ಇಂಥ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿದ್ದಾರೆ. ಇಂದಿನ ದಿನದಲ್ಲಿ ಕಂಪ್ಯೂಟರ್ ಜ್ಞಾನ ಇದ್ದರೆ ಮಾತ್ರ ಬೆಳೆಯಲು ಸಾಧ್ಯ. ಆದ್ದರಿಂದ ಮಕ್ಕಳು ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಬೇಕು. ಎಲ್ಲ ಮಕ್ಕಳು ಐಎಎಸ್ ಆಗುವುದು ಬೇಡ. ಅವರು ಯಾವ ವಿಷಯದಲ್ಲಿ ಅಥವಾ ಕ್ರೀಡೆ ಸೇರಿ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದ್ದಾರೆ. ಅದರಲ್ಲಿ ಅವರನ್ನು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸಮಾಜ ಹೇಗೆ ಬದಲಾವಣೆ ಆಗುತ್ತೋ ಆ ರೀತಿ ಜನರ ಆಶೋತ್ತರ ಬದಲಾಗುತ್ತದೆ. ಸ್ವಾತಂತ್ರ$್ಯದ ಸಮಯದಲ್ಲಿ ಒಂದು ಹೊತ್ತು ಊಟ, ಹಾಕಲು ಬಟ್ಟೆಗೆ ಸೀಮಿತ ಆಗಿತ್ತು. ನಂತರ ವಿದ್ಯುತ್, ನೀರು, ರಸ್ತೆ ಬೇಕು ಎಂದಾಯಿತು. ಈಗ ಶಿಕ್ಷಣ, ಸಹಾಯ ಹಾಗೂ ತಂತ್ರಜ್ಞಾನ ಬೇಕು ಎಂಬ ಬೇಡಿಕೆಯಿದೆ.
ಭಾರತ ದೇಶ ಇಂದು ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿದೆ. ಕೈಗಾರಿಕೆಯಲ್ಲಿ ಮೂರನೇ ಸ್ಥಾನದಲ್ಲಿವೆ. ಮಾರುಕಟ್ಟೆಗೆ ಹೊಸ ಹೊಸ ಆ್ಯಪ್ ಸೇರಿ ಬಹಳಷ್ಟು ಹೊಸ ತಂತ್ರಜ್ಞಾನ ಬರುತ್ತಿವೆ. ಅದಕ್ಕೆ ಹೊಂದಿಕೊಂಡು ನಾವು ಕೂಡ ಹೊಸ ಆಲೋಚನೆಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಜಿಪಂ ಸಿಇಒ ರುಚಿ ಬಿಂದಲ್, ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ಎಸ್ಪಿ ಅಂಶುಕುಮಾರ, ಪ್ರಾಚಾರ್ಯ ರವಿಕುಮಾರ ನಾಯಕ, ನಗರಸಭೆ ಸದಸ್ಯೆ ಜಯಶ್ರೀ ಪಿಸೆ, ಚಂದ್ರಕಲಾ ಬಿಷ್ಟಣ್ಣನವರ ಹಾಗೂ ಸಿಬ್ಬಂದಿ ಇದ್ದರು.