10, 11ಕ್ಕೆ ಮಕ್ಕಳ ನಾಟಕೋತ್ಸವ

budi deepa
ಕೋಲಾರ ಪತ್ರಕರ್ತರ ಭವನದಲ್ಲಿ ಸಾಹಿತಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಪ್ರಕಾಶ್​, ಕೀಲುಕೋಟೆ ನಾರಾಯಣಸ್ವಾಮಿ, ಪ್ರಸನ್ನ ಕುಮಾರ್​ ಇದ್ದರು.
Published on

ಕೋಲಾರ: ತಾಲೂಕಿನ ತೇರಹಳ್ಳಿ ಬೆಟ್ಟದ ಬುಡ್ಡೀದಿಪ ಸಂಸ್ಥೆಯಿಂದ ನಡೆಯುತ್ತಿರುವ ಕಿಶೋರ ಮೇಳದ ಅಂಗವಾಗಿ, ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮೇ 10 ಮತ್ತು 11ರಂದು ಹುಲ್ಲಿನ ಗಮಲು ಮಕ್ಕಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಟ್ಟದ ಮೇಲೆ ನಡೆಯುತ್ತಿರುವ ಬೇಸಿಗೆ ಶಿಬಿರಗಳಲ್ಲಿ ಸಾವಿರಾರು ಮಕ್ಕಳು ಭಾಗಿಯಾಗಿದ್ದಾರೆ. ಈಗ ಹೆಮ್ಮೆ ಪಡುವ ಹೆಜ್ಜೆಗಳಾಗಿವೆ. ಆದರೆ, ಈ ಹೆಜ್ಜೆಗಳಡಿ ಬೆಟ್ಟದ ಹುಲ್ಲಿನ ಎಸಳುಗಳು ನಲಗುತ್ತಿವೆ, ಆದ್ದರಿಂದಲೇ ಬುಡ್ಡೀದಿಪ ನಾಟಕೋತ್ಸವಕ್ಕೆ ಹುಲ್ಲಿನ ಗಮಲು ನಾಟಕೋತ್ಸವ ಎಂಬ ಹೆಸರಿಟ್ಟಿದ್ದಾಗಿ ತಿಳಿಸಿದರು.

ಈ ಹಿಂದೆ ನೆಲಗಮಲು ನಾಟಕೋತ್ಸವ, ಬಡಮಾಕನಹಳ್ಳಿಯಲ್ಲಿ ಉಣ್ಣೆಯ ಗಮಲು-ಕಂಬಳಿ ಪಾಠಗಳ ನಾಟಕೋತ್ಸವ ನಡೆದಿತ್ತು, ಈ ಬಾರಿಯ ಪ್ರಯೋಗ ಹುಲ್ಲಿನ ಗಮಲು ನಾಟಕೋತ್ಸವ ಆಗಿದೆ ಎಂದು ವಿವರಿಸಿದರು.

ನುಡಿಕಾರನ ನುಡಿಗಳನ್ನು ಯಾರು ಬೇಕಾದರೂ ನಕಲು ಮಾಡಬಹುದು, ಆದರೆ, ಜೀವ, ಆಗ ಆಜೀವವೇ ಈ ಜೀವಕ ನಡೆ ಎಂದು ಮಾರ್ಮಿಕವಾಗಿ ತಿಳಿಸಿದ ಅವರು, ಆದಿಮದಿಂದ ಆಜೀವಕ ಅಲ್ಲಿಂದೀಗ ಬುಡ್ಡೀದಿಪವಾಗಿದೆ, ಬುಡ್ಡೀದಿಪಕ್ಕೆ ನಾನು ಬೆಳಗು ಬತ್ತಿನ ಒಡಲಾಗಿರುವೆ, ಕಿರಣದಷ್ಟಾದರೂ ಬೆಳಕು ಕೊಟ್ಟಿರುವೆ, ಅದರ ದನಿ ಈ ಬೆಟ್ಟದ ಹುಲ್ಲಿನ ಅಂತರಂಗ ಮುಟ್ಟಿದ್ದರಿಂದ ಇವತ್ತು ಅದರ ಘನತೆ ಎತ್ತಿ ಹಿಡಿಯಲು ಮಹಾತ್ಮ ಫುಲೆ ಅಕ್ಷರ ಅಕಾಡೆಮಿ-ಕೋಲಾರ, ಅರಿವು ಮಕ್ಕಳ ಧಾಮ-ಬೆಂಗಳೂರು ಮತ್ತು ಐಕ್ಯ ಬುಕ್​ ಹೌಸ್​ - ಹೊಸಕೋಟೆ ಜತೆಗಿದ್ದಾರೆ ಎಂದು ಹೇಳಿದರು.

ಕೋಲಾರ ನೆಲದಲ್ಲಿ ಮಕ್ಕಳ ನಾಟಕೋತ್ಸವಗಳನ್ನು ನಡೆಸಲು ಬಂದ ತಮಗೆ ಸಿಹಿ- ಕಹಿಯ ಅನುಭವಾಗಿದೆ. ಮಕ್ಕಳ ನಾಟಕೋತ್ಸವಗಳ ಮೂಲಕ ನೆಲ ಸಂಸತಿಯ ನಡೆ ಆರಂಭಿಸಿದ್ದು ಸಿಹಿಯಾದರೆ, ಕಟ್ಟಿದ ಸಂಸ್ಥೆಯೇ ತಮ್ಮ ನಾಟಕಗಳನ್ನು ಬಹಿಷ್ಕಾರ ಹಾಕಿರುವುದು ಕಹಿ ಅನುಭವವಾಗಿದೆ ಎಂದು ರಾಮಯ್ಯ ಹೇಳಿದರು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರಂಗ ಗಂಗೋತ್ರಿ ಆದಿಮ ನನ್ನ ನಾಟಕವೊಂದನ್ನೂ ಕೈಗೆತ್ತಿಕೊಂಡಿಲ್ಲ. ಈ ಬಾರಿಯ ರಂಗಾಯಣ 12, ಸಾರಂಗರಂಗ 2 ನಾಟಕಗಳನ್ನು ಮಾಡುವಾಗ ಆದಿಮ ಒಂದನ್ನಾದರೂ ಕೈಗೆತ್ತಿಕೊಳ್ಳಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

ಶಶಿಕುಮಾರ್​, ನವೀನ್​ಕುಮಾರ್​, ರೇಣುಕುಮಾರ್​ ಇದ್ದರು.

* ಢರ್​ ಭರ್​ ಬುಡ್ಡಣ್ಣ, ಸಾವಿತ್ರಿ ಫುಲೆ

ಎರಡೂ ದಿನಗಳ ಕಾಲ ತಾವು ರಚಿಸಿದ ಎರಡು ನಾಟಕಗಳನ್ನು ಮಕ್ಕಳು ಅಭಿನಯಿಸುತ್ತಿದ್ದು, ಮೇ 10 ರಂದು ಸಂಜೆ 6.30ಕ್ಕೆ ಶಂಕರಯ್ಯ ಆರ್​.ಘಂಟೆ ನಿರ್ದೇಶನದ ಬುಡ್ಡಿ ದೀಪ ತಂಡದ "ಢರ್​ ಭರ್​ ಬುಡ್ಡಣ್ಣ' ಮತ್ತು ಮೇ 11ರಂದು ಸಂಜೆ 6.30ಕ್ಕೆ ಅಶೋಕ್​ ಕೊಡಗು ನಿರ್ದೇಶನದಲ್ಲಿ ಮೈಸೂರು ರಂಗಾಯಣ ತಂಡದ "ಸಾವಿತ್ರಿ ಫುಲೆ' ನಾಟಕ ಪ್ರದರ್ಶನವಾಗಲಿದೆ ಎಂದು ರಾಮಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net