

ಮಸ್ಕಿ: ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸಿ ಎಂದು ಪಟ್ಟಣದ ಲಯನ್ಸ್ ಶಾಲೆಯ ಮಕ್ಕಳು ಗುರುವಾರ ಪರಿಸರ ದಿನಾಚರಣೆ ನಿಮಿತ್ತ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮತ್ತು ಮುಖ್ಯಾಧಿಕಾರಿ ನರಸರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಅಲ್ಲದೆ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಮಾರಾಟ ಮಾಡಬೇಡಿ, ಬಟ್ಟೆ, ಕಾಗದ ಕೈ ಚೀಲ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕೋರಿದರು. ಲಯನ್ಸ್ ಶಾಲೆಯ ಅಧ್ಯಕ್ಷ ಶಿವರಾಜ ಇತ್ಲಿ, ಮುಖ್ಯಶಿಕ್ಷಕ ರಾಮಸಿಂಗ್ ಇತರರಿದ್ದರು.
ಇನ್ನು ಅಭಿನಂದನ ಶಿಕ್ಷಣ ಹಾಗೂ ಬಡ ಮಕ್ಕಳ ವಸತಿ ನಿಲಯದಲ್ಲಿ ಪರಿಸರ ದಿನ ಆಚರಿಸಲಾಯಿತು. ನಿಲಯದ ಅಧ್ಯಕ್ಷ ರಾಮಣ್ಣ ಹಂಪರಗುಂದಿ ಮಾತನಾಡಿ, ಮನೆಗೊಂದು ಮರ ಮಸ್ಕಿ ಬೃಂದಾವನ ಕನಸು ನನಸು ಮಾಡುವ ಉದ್ದೇಶದಿಂದ ಈ ವರ್ಷ ಹೊಸ ಯೋಜನೆ ರೂಪಿಸಿದ್ದು, ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಸಸಿ ವಿತರಣೆ ಮಾಡಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ವೀರಭದ್ರಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಪಾಪತಿ ಹೂಗಾರ ಮಾತನಾಡಿದರು. ಪ್ರಮುಖರಾದ ಸುಕಮುನಿಯಪ್ಪ ನಾಯಕ, ಮಹಾಂತೇಶ, ಮಹೇಶ ಶೆಟ್ಟರ್ ಇತರರಿದ್ದರು.