ಗಿಡ ನೆಟ್ಟು, ಪೋಷಿಸುವ ಜವಾಬ್ದಾರಿ ಮಕ್ಕಳಿಗೆ

education department
ಗಾಡಿಕೊಪ್ಪ ಶಾಲೆಯಲ್ಲಿ ಸಸ್ಯ ಶ್ಯಾಮಲಾ ಕಾರ್ಯಕ್ರಮವನ್ನು ಸ್ನೇಹಲ್ ಲೋಖಂಡೆ ಉದ್ಘಾಟಿಸಿದರು. ಸಿ.ಆರ್.ಪರಮೇಶ್ವರಪ್ಪ, ನಾಗರಾಜ್, ಭುವನೇಶ್ವರಿ, ಪ್ರದೀಪ್ ಕುಮಾರ್, ಮಲ್ಲಿಕಾರ್ಜುನ್ ಇತರರಿದ್ದರು.
Published on

ಶಿವಮೊಗ್ಗ: ಇತ್ತೀಚೆಗೆ ಹೆಚ್ಚು ಅರಣ್ಯ ನಾಶವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅರಣ್ಯ ನಾಶವಾದಷ್ಟೂ ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಇಂದಿನ ತುರ್ತು ಅಗತ್ಯವಾಗಿದೆ ಎಂದು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಹೇಳಿದರು.

ಗಾಡಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಸ್ಯ ಶ್ಯಾಮಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರವಿದ್ದರೆ ಮಾತ್ರ ಮನುಷ್ಯ ಆರೋಗ್ಯದಿಂದ ಬದುಕಲು ಸಾಧ್ಯ. ಪರಿಸರ ಸಂರಕ್ಷಣೆ ವಿಷಯದಲ್ಲಿ ವಿದ್ಯಾರ್ಥಿಗಳ ಮೇಲೂ ಹೆಚ್ಚಿನ ಜವಾಬ್ದಾರಿಯಿದೆ. ಶಾಲೆಯಲ್ಲಿ ಪ್ರತಿ ಮಕ್ಕಳೂ ಒಂದೊಂದು ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದರು.
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಶಾಲಾ ಮಕ್ಕಳ ಹಾಜರಾತಿ ಹಾಗೂ ಸ್ಥಳಾವಕಾಶ ಆಧರಿಸಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 18,718 ಮತ್ತು ಪ್ರೌಢಶಾಲೆ ಮಕ್ಕಳಿಗೆ 5,566 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24,284 ಸಸಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ನೆಟ್ಟ ಗಿಡಗಳಿಗೆ ವಿದ್ಯಾರ್ಥಿಗಳು ವಾರಕ್ಕೆ 10 ಲೀಟರ್ ನೀರು ಹಾಕಬೇಕು. ಅವುಗಳ ರಕ್ಷಣೆಯ ಉಸ್ತುವಾರಿಯನ್ನು ಮಕ್ಕಳಿಗೆ ಹಂಚಿಕೆ ಮಾಡಲಾಗುವುದು. ಸತತ ಮೂರು ವರ್ಷ ಗಿಡಗಳ ಪೋಷಣೆ ಮಾಡಬೇಕು. ಚೆನ್ನಾಗಿ ಗಿಡ ಬೆಳೆಸಿದ ಮಕ್ಕಳಿಗೆ ಶಾಲೆಯಲ್ಲಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಬಿಇಒ ನಾಗರಾಜ್ ಮಾತನಾಡಿ, ಶಿಕ್ಷಣ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ಸರ್ಕಾರದ ವಿನೂತನ ಕಾರ್ಯಕ್ರಮ ಸಸ್ಯ ಶ್ಯಾಮಲಗೆ ರಾಜ್ಯಾದ್ಯಂತ ಚಾಲನೆ ದೊರೆತಿದೆ. ಸೆ.11 ರಿಂದ 15ರವರೆಗೆ 5 ದಿನಗಳ ಕಾಲ ಈ ಕಾರ್ಯಕ್ರಮವು ಶಾಲೆಗಳು ಮತ್ತು ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದರು.
ಆರ್‌ಎಫ್‌ಒ ಪ್ರದೀಪ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕಿ ಭುವನೇಶ್ವರಿ, ಡಿಡಿಪಿಐ ಕಚೇರಿ ತಾಂತ್ರಿಕ ಸಹಾಯಕಿ ಎಚ್.ಸಿ.ಲಕ್ಷ್ಮೀ, ಸಿಆರ್‌ಪಿ ಶೈಲಶ್ರೀ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net