ದುಶ್ವಟಗಳಿಂದ ಮಕ್ಕಳು ಅಡ್ಡ ದಾರಿ ಹಿಡಿಯುವ ಸಾಧ್ಯತೆ

Cyber Crime awareness
ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಸೈಬರ್ ಠಾಣೆ ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ ಉದ್ಘಾಟಿಸಿದರು. ಮೋಹನ್, ಮಮತಾ ಶಿವಣ್ಣ, ಪರಶುರಾಮ, ಅಂಬಿಕಾ, ಪ್ರಶಾಂತ್, ಸುಪ್ರಿಯಾ ಇದ್ದರು.
Published on

ಶಿವಮೊಗ್ಗ: ದುಶ್ವಟಗಳಿಂದ ಮಕ್ಕಳು ಅಡ್ಡ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಹಾಗಾಗಿ ಶಾಲೆಗಳಲ್ಲಿ ಶಿಕ್ಷಕರು, ಮನೆಗಳಲ್ಲಿ ಪಾಲಕರು ಮಕ್ಕಳ ಮೇಲೆ ನಿಗಾ ಇರಿಸಬೇಕು ಎಂದು ಶಿವಮೊಗ್ಗ ಸೈಬರ್ ಅಪರಾಧ ಠಾಣೆ ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ ಸಲಹೆ ನೀಡಿದರು.

ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿವಮೊಗ್ಗದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈಬರ್ ಜಾಲ ವ್ಯಾಪಕವಾಗಿ ಹರಡುತ್ತಿದೆ. ಹದಿಹರಿಯದ ಮಕ್ಕಳು ನಾನಾ ಕಾರಣಗಳಿಂದ ದುಶ್ಚಟಗಳ ದಾಸರಾಗುತ್ತಿದ್ದಾರೆ. ಬಾಲ್ಯದಿಂದಲೇ ಅವುಗಳಿಗೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ದೊಡ್ಡ ಅನಾಹುತಗಳು ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ತಂಬಾಕು ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳು ಹಾಗೂ ದುಶ್ಚಟದ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಿನ ಪೀಳಿಗೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ತಾಲೂಕಿನ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಮಾತನಾಡಿ, ತಂಬಾಕು ಸೇವನೆ, ಮಧ್ಯಪಾನ, ಧೂಮಪಾನ ಮಾಡುವುದರಿಂದ ಮಕ್ಕಳು ದೂರವಿರಬೇಕು ಮತ್ತು ಜಾಗೃತರಾಗಿರಬೇಕು. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಉತ್ತಮ ಮನೋಭಾವನೆ, ಶಿಸ್ತು, ಉತ್ತಮ ಆರೋಗ್ಯ ಮತ್ತು ಸಮಾನತೆ ಬೆಳೆಯಲು ಪ್ರೇರಣೆ ಸಿಕ್ಕಂತಾಗುತ್ತದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಮಮತಾ ಶಿವಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ, ಹೊಸಮನೆ ಒಕ್ಕೂಟದ ಅಧ್ಯಕ್ಷೆ ಅಂಬಿಕಾ, ವಲಯದ ಮೇಲ್ವಿಚಾರಕ ಪ್ರಶಾಂತ್, ಸೇವಾ ಪ್ರತಿನಿಧಿ ಸುಪ್ರಿಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net