

ಹಾವೇರಿ: ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ ಕಾಮಿರ್ಕ ನಿಷೇಧ ಕಾಯ್ದೆ ಸೇರಿ ವಿವಿಧ ಕಾಯ್ದೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಪ್ರಗತಿ ಪರಿಶೀಲನಾ ಸಮಿತಿ, ಜಿಲ್ಲಾ ಮಟ್ಟದ ಸ್ವತಂತ್ರ ವಿಶೇಷ ಕಾರ್ಯಪಡೆ ಸಮಿತಿ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲಗಭಿರ್ಣಿಯರು, ಪೋಕ್ಸೋ ಪ್ರಕರಣ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಬಾಲ್ಯ ವಿವಾಹ ತಡೆ, ಪೋಕ್ಸೋ ಪ್ರಕರಣಗಳ ತಡೆಗೆ ಕೆಳಮಟ್ಟದಲ್ಲಿ ಕೆಲಸ ಮಾಡುವ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಪಂ ಪಿಡಿಒ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಇವರ ಕಾರ್ಯವೈಖರಿ ಬದಲಾಗಬೇಕು. ಬಾಲ್ಯವಿವಾಹಗಳು ತುರ್ತಾಗಿ ನಡೆಯುವುದಿಲ್ಲ, ಹಾಗಾಗಿ ಗ್ರಾಮಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಅವರನ್ನು ಮರಳಿ ಶಾಲೆಗೆ ದಾಖಲಿಸಲು ಪಾಲಕರ ಮನವೊಲಿಸಬೇಕು. ಜನರಿಗೆ ಕಾನೂನುಗಳ ಬಗ್ಗೆ ಮನದಟ್ಟು ಮಾಡಬೇಕು. ವಿವಿಧ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಬಾಲ್ಯವಿವಾಹ ತಡೆಗೆ ಶ್ರಮಿಸಬೇಕು ಎಂದರು.
ಜವಾಬ್ದಾರಿ ಅರಿತು ಕೆಲಸಮಾಡಿ...
ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆದ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ನಿರಂತರ ಅವರ ಸಂಪರ್ಕದಲ್ಲಿರಬೇಕು. ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಹಾಗೂ ಕಾನೂನುಗಳ ಉಲ್ಲಂಘನೆಯಾದಾಗ ವಿಧಿಸುವ ಶಿಕ್ಷೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಬಾಲ್ಯವಿಹಾಹ, ಬಾಲಗಭಿರ್ಣಿ, ದೌರ್ಜನ್ಯ ಸೇರಿ ಇತರ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದರು.
ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವವರು ಇಂತಹ ಪ್ರಕರಣಗಳನ್ನು ಅತ್ಯಂತ ಸೂಕ್ಷ$್ಮ್ಮವಾಗಿ ಗಮನಿಸಬೇಕು. ಒಂದು ವೇಳೆ ಯಾರದೂ ಗಮನಕ್ಕೆ ಬಾರದೆ ಬಾಲ್ಯವಿವಾಹಗಳು ನಡೆದರೆ ಯಾವುದೆ ಒತ್ತಡಕ್ಕೂ ಮಣಿಯದೆ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೋಟಿಸ್ ಜಾರಿಗೊಳಿಸಿ...
ಶಿಗ್ಗಾಂವಿ ತಾಲೂಕಿನ ಬಾಲ್ಯ ವಿವಾಹ ಪ್ರಕರಣದಲ್ಲಿ ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಹಾಗೂ ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕ ಬೇರೆಯಾಗಿದ್ದರೂ ಸಹ ದಾಖಲೆಗಳನ್ನು ಪರಿಶೀಲಿಸದ ಮದುವೆ ನೋಂದಣಿ ಮಾಡಿದ ಶಿಗ್ಗಾಂವಿ ಉಪ ನೋಂದಣಾಧಿಕಾರಿಗೆ ನೋಟಿಸ್ ಜಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿರಿಯ ದಿವಾಣಿ ನ್ಯಾಯಾಧೀಶ ಬಿ.ಆರ್. ಮುತಾಲಿಕದೇಸಾಯಿ ಮಾತನಾಡಿ, ಪದವಿ ಪೂರ್ವ ಶಿಕ್ಷಣದಿಂದ ಹೊರಗುಳಿದವರ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
17 ಬಾಲ್ಯ ವಿವಾಹ ತಡೆ...
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನರ್ಪೂಣ ಸಂಗಳದ ಮಾತನಾಡಿ, ಕಳೆದ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಒಟ್ಟು 17 ಬಾಲ್ಯ ವಿವಾಹ ತಡೆಯಲಾಗಿದೆ. ಈ ಅವಧಿಯಲ್ಲಿ ಐದು ಬಾಲ್ಯವಿವಾಹಗಳು ನಡೆದಿವೆ. 13 ಜನ ಬಾಲಗಭಿರ್ಣಿಯರು, 31 ಪೋಕ್ಸೋ ಪ್ರಕರಣಗಳು ದಾಖಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮಕ್ಕಳ ಸಹಾಯವಾಣಿ 1098 ಸಂಖ್ಯೆ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದತಿರ್, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ ಮತ್ತಿತರರಿದ್ದರು.