ಉಡುಪಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೋವಿಡ್-19 ಬಗ್ಗೆ ಮಕ್ಕಳ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಕೌನ್ಸಿಲಿಂಗ್ ನಡೆಸಲು ಉಚಿತ ಸಹಾಯವಾಣಿ ‘ಸಂವೇದನಾ’ ಆರಂಭಿಸಿದ್ದು, ಬೆಳಗ್ಗೆ 9 ರಿಂದ 5ರವರೆಗೆ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ ಎಂದು ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ಡಾ. ಆರ್.ಜಿ. ಆನಂದ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಾಯವಾಣಿ ಸಂಖ್ಯೆ 18001212830 ಆಗಿದ್ದು, ಕನ್ನಡ ಸಹಿತ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಾಚರಿಸುತ್ತಿದೆ. ಕೋವಿಡ್ ಮಾತ್ರವಲ್ಲದೆ ಡ್ರಗ್ಸ್, ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆಯೂ ಕಾಳಜಿ ವಹಿಸಲಿದೆ. ಈ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಲಿದೆ. ಇಲ್ಲಿಗೆ ಸಲ್ಲಿಕೆಯಾಗುವ ದೂರುಗಳನ್ನು 24 ಗಂಟೆಯೊಳಗೆ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈಗಾಗಲೇ ದಿನಕ್ಕೆ 2 ರಿಂದ 3 ಸಾವಿರ ಕರೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದರು.
ಮಕ್ಕಳ ಆರೋಗ್ಯ ಸ್ಥಿತಿಗತಿ, ಬಾಲ್ಯ ವಿವಾಹ, ಬಾಲಾಪರಾಧಿ ಕಾಯ್ದೆ, ಅನಾಥ ಮಕ್ಕಳ ರಕ್ಷಣೆ ಸಹಿತ 6 ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲು ದೇಶಾದ್ಯಂತ 200 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಮಕ್ಕಳ ಹಕ್ಕು ರಕ್ಷಣೆ ವಿಚಾರದಲ್ಲಿ ಉಡುಪಿ ಜಿಲ್ಲೆ ಮಾದರಿಯಾಗಿದೆ. ಇಲ್ಲಿ 20ಕ್ಕೂ ಅಧಿಕ ಮಕ್ಕಳ ರಕ್ಷಣಾ ಕೇಂದ್ರಗಳಿದ್ದು, 400ಕ್ಕೂ ಅಧಿಕ ಮಕ್ಕಳು ಸುರಕ್ಷಿತವಾಗಿದ್ದಾರೆ. 2021ರಲ್ಲಿ ಬಾಲ್ಯವಿವಾಹ ಶೂನ್ಯವಾಗಿದ್ದು, ಮಕ್ಕಳ ಸ್ನೇಹಿ ಜಿಲ್ಲೆಯಾಗಿ ಗುರುತಿಸಿಕೊಂಡಿದೆ ಎಂದರು.
ಉಡುಪಿ ಜಿಲ್ಲೆ ಮಾದರಿ
ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್‌ಪಿ ಕುಮಾರಚಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ, ಮಕ್ಕಳ ರಕ್ಷಣಾ ಘಟಕ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.