

ಶಿವಮೊಗ್ಗ: ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದ್ದು, ತಡೆಗಟ್ಟುವ ಜತೆಗೆ ಅರಿವು ಮೂಡಿಸಲು ಹೆಚ್ಚು ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಏಪ್ರಿಲ್ ನಿಂದ ಜೂನ್‌ವರೆಗೆ 43 ಬಾಲ್ಯ ವಿವಾಹ ಪ್ರಕರಣ ದಾಖಲಾಗಿವೆ. ಶಿವಮೊಗ್ಗದಲ್ಲಿ 19, ಭದ್ರಾವತಿಯಲ್ಲಿ 12 ಪ್ರಕರಣಗಳಿವೆ ಎಂದು ತಿಳಿಸಿದರು.
2022-23ನೇ ಸಾಲಿನಲ್ಲಿ ಒಟ್ಟು 247 ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿವೆ. ಬಾಲ್ಯ ವಿವಾಹಗಳನ್ನು ತಡೆಯಲು ಸಿಡಿಪಿಒಗಳು ಶಾಲಾ ಕಾಲೇಜು, ಹಾಸ್ಟೆಲ್‌ಗಳಲ್ಲಿ ಅರಿವು ಕಾರ್ಯಕ್ರಮ ಮಾಡಬೇಕು. ಹೆಚ್ಚಿನ ಪ್ರಕರಣ ದಾಖಲಾಗಿರುವ ಕಡೆ ಸಮುದಾಯದಲ್ಲಿ ಸೇವೆ ಸಲ್ಲಿಸಿರುವ ಮುಖಂಡರ ನೇತೃತ್ವದಲ್ಲಿ ಪಾಲಕರಿಗೆ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಅನಧಿಕೃತ ಸ್ಪಾಗಳ ವಿರುದ್ಧ ಕ್ರಮ: ಶಿವಮೊಗ್ಗ ನಗರದಲ್ಲಿ ಸ್ಪಾಗಳ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿ ವೇಶ್ಯಾವಾಟಿಕೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ.ರೇಖಾ ಮನವಿ ಮಾಡಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸ್ಪಾಗಳು ಪಾಲಿಕೆ ಮತ್ತು ಎಸ್‌ಪಿ ಕಚೇರಿಯಿಂದ ಪರವಾನಗಿ ಮತ್ತು ಅನುಮತಿ ಪಡೆಯಬೇಕು. ಪರವಾನಗಿ ಪಡೆಯದೆ ಹಾಗೂ ನಿಯಮಗಳನ್ನು ಅನುಸರಿಸದೇ ಅನಧಿಕೃತವಾಗಿ ನಡೆಸುತ್ತಿರುವ ಸ್ಪಾಗಳ ಮೇಲೆ ದಾಳಿ ನಡೆಸಿ ಮುಚ್ಚಲು ಕ್ರಮ ವಹಿಸಲಾಗುವುದು ಎಂದರು.
ದಾಳಿ ವೇಳೆ ಸಿಡಿಪಿಒಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಯವರು ಹಾಜರಾಗಬೇಕು. ನಿಯಮಿತವಾಗಿ ಸ್ಪಾಗಳ ಚಟುವಟಿಕೆ ಬಗ್ಗೆ ಪರಿಶೀಲಿಸಬೇಕು. ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆ ಕುರಿತು ಅರಿವು ಕಾರ್ಯಗಳನ್ನು ಕೈಗೊಳ್ಳಬೇಕು ಹಾಗೂ ಪಾಲಕರು, ಮುಖಂಡರ ಮುಂದಾಳತ್ವದಲ್ಲಿ ಜಾಗೃತಿ ಮೂಡಿಸಬೇಕೆಂದರು.
ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್‌ಕುಮಾರ್, ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕಿ ನಂದಿನಿ, ಡಿಎಚ್‌ಒ ಡಾ. ನಟರಾಜ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ನಿರೂಪಣಾಧಿಕಾರಿ ಡಾ. ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಹಾಜರಿದ್ದರು.