

ಚಿಂತಾಮಣಿ: ಕರೊನಾ ಲಾಕ್‌ಡೌನ್ ನಡುವೆಯೂ ತಾಲೂಕಿನ ಎ. ಗುಟ್ಟಹಳ್ಳಿಯಲ್ಲಿ ಬಾಲ್ಯವಿವಾಹ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಪಾಲಕರು ಬಾಲ್ಯವಿವಾಹ ನೆರವೇರಿಸಿದ್ದಾರೆ.
ಎ. ಗುಟ್ಟಹಳ್ಳಿಯ 16 ವರ್ಷದ ಬಾಲಕಿಯನ್ನು, ಸಂಬಂಧಿಯಾದ ಶ್ರೀನಿವಾಸಪುರ ತಾಲೂಕಿನ ಕನ್ನಸಂದ್ರದ ನಾಗರಾಜ್ ಎಂಬಾತನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆದಿತ್ತು. ಇದಕ್ಕೆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಳು.
ಈ ವಿಷಯ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ಬಂದಿದ್ದು, ಏ.17ರಂದು ಗ್ರಾಮಾಂತರ ಠಾಣೆಗೆ ಬಾಲಕಿಯ ಪಾಲಕರನ್ನು ಕರೆಸಿ ಬಾಲ್ಯವಿವಾಹ ಮಾಡದಂತೆ ಎಚ್ಚರಿಕೆ ನೀಡಿದ್ದರು. ಅದರಂತೆ ಮದುವೆ ಮಾಡುವುದಿಲ್ಲ ಎಂದು ಪಾಲಕರು ಒಪ್ಪಿಕೊಂಡಿದ್ದರು.
ಆದರೆ ಏ. 29 ರಂದು ಹುಡುಗನ ಗ್ರಾಮವಾದ ಕನ್ನಸಂದ್ರದಲ್ಲಿ ಮದುವೆ ಮಾಡಿದ್ದು, ಹುಡುಗ ಹಾಗೂ ಬಾಲಕಿಯ ಪಾಲಕರ ಜತೆ ಇತರರು ಪಾಲ್ಗೊಂಡಿದ್ದರು. ಮದುವೆಯಾದ ನಂತರ ಬಾಲಕಿ ಕನ್ನಸಂದ್ರದಲ್ಲಿ 5 ದಿನ ಕಳೆದಿದ್ದಾಳೆ ಎನ್ನಲಾಗಿದೆ.
ಇದೀಗ ಬಾಲಕಿಯ ಪಾಲಕರು, ಹುಡುಗ ಹಾಗೂ ಆತನ ಪಾಲಕರ ವಿರುದ್ಧ ಬಾಲ್ಯ ವಿವಾಹ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.