ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಮನ್ವಯತೆಯಿರಲಿ: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಸಲಹೆ

24-02-rama-Minority
Published on

ರಾಮನಗರ : ಮುಸ್ಲಿಂ ಸಮುದಾಯದಲ್ಲಿ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗುತ್ತಾರೆ. ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಬಹಳ ಮುಖ್ಯ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಾಜ ಕಾರ್ಯಕರ್ತರಾದ ದಸ್ತಗಿರ್ ಆಲಂ ಅವರು ಸರಿಯಾಗಿ ಸಮೀಕ್ಷೆ ನಡೆಸುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ.

ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಮುಸ್ಲಿಂ ಗ್ರಾೃಜುಯೇಟ್ ಫೋರಂನಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದ್ದು, ಕಟ್ಟಡ ನಿರ್ಮಾಣ ಮಾಡಲು ಸ್ಥಳದ ಅವಶ್ಯಕತೆ ಇದೆ.

ಕೂಡಲೇ ಸ್ಥಳ ನೀಡುವಂತೆ ಎಂದು ನಯಾಜ್ ಅಹಮದ್ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಜೀಂ, ಜಿಲ್ಲೆಯಲ್ಲಿ ಸಿಎ ನಿವೇಶನಗಳು ಲಭ್ಯವಿಲ್ಲ. ರಾಮನಗರದ ಹೊರವಲಯದಲ್ಲಿ ಸ್ಥಳ ಗುರುತಿಸಿ ಅರ್ಜಿ ಸಲ್ಲಿಸಿದರೆ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸ್ಥಳ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಸಭೆಯಲ್ಲಿ ರಾಮನಗರ ನಗರಸಭೆ ಆಯುಕ್ತ ಬಿ.ನಂದ ಕುಮಾರ್, ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದು ಕೋರತೆ ಸಭೆಗೂ ಮುನ್ನ ಅಧ್ಯಕ್ಷರು ರಾಮನಗರ ಜಿಲ್ಲಾ ಆಸ್ಪತ್ರೆ, ಟಿಪ್ಪುನಗರದ ಮಸೀದಿ, ರಾಮನಗರದ ಲೂರ್ದು ಮಾತೆಯರ ದೇವಾಲಯ ಮತ್ತು ಸರ್ಕಾರಿ ಮುಸ್ಲಿಂ ವಸತಿ ಕಾಲೇಜು ಹಾಗೂ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಶೈಕ್ಷಣಿಕ ಸಾಲಕ್ಕೆ ವ್ಯವಸ್ಥೆ ಮಾಡುವಂತೆ ಮನವಿ :  ಫರೂಕಿಯಾ ಕಾಲೇಜಿನ ಉಪನ್ಯಾಸಕ ಫಕ್ರುದ್ದೀನ್ ಮಾತನಾಡಿ, ದೇಶದ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣಕ್ಕಾಗಿ ನೀಡಲಾಗುವ ಅರಿವು ಶೈಕ್ಷಣಿಕ ಸಾಲವನ್ನು ತಡೆ ಹಿಡಿಯಲಾಗಿದೆ. ಈ ಅನುದಾನವನ್ನು ಮಕ್ಕಳಿಗೆ ಒದಗಿಸಿಕೊಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ತೊಂದರೆಯಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಾರಿ ಆಯವ್ಯಯದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗುವ ಶೈಕ್ಷಣಿಕ ಸಾಲದ ವ್ಯವಸ್ಥೆ ಮಾಡಬೇಕಾಗಿ ಮನವಿ ಸಲ್ಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net