

ಬೆಂಗಳೂರು ರಾಜ್ಯದ 18 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ತಾಣ ಸೇರಿ ಮೊಬೈಲ್‌ನಲ್ಲಿ ಅನಗತ್ಯವಾದ ವಿಷಯಗಳಿಂದ ದೂರವಿರಲು ಕಡಿವಾಣ ಹಾಕುವ ಸಂಬಂಧ ನಿಯಮ ರೂಪಿಸುವಂತೆ ಶಿಫಾರಸು ಮಾಡಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಚಿಂತನೆ ನಡೆಸಿದೆ.
ಸಾಮಾಜಿಕ ಜಾಲತಾಣಗಳ ಬಳಕೆಗೂ ವಯೋಮಿತಿ ನಿಗದಿ ಮಾಡುವಂತೆ ಇತ್ತೀಚೆಗೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಅದರ ಬೆನ್ನಲ್ಲೇ ಆಯೋಗ ಕೂಡ ಸಭೆ ನಡೆಸಿ ಪ್ರಮುಖ ಶಿಫಾರಸು ಮಾಡಲು ಮುಂದಾಗಿದೆ.
ಮಕ್ಕಳಲ್ಲಿ ಮೊಬೈಲ್ ಬಳಕೆ ಜಾಸ್ತಿಯಾಗುತ್ತಿರುವುದರಿಂದ ಏಕಾಗ್ರತೆ ಕಡಿಮೆಯಾಗುತ್ತಿದೆ. ಓದುವಿನಲ್ಲಿಯೂ ಹಿಂದುಳಿಯುತ್ತಿದ್ದಾರೆ. ಮಾನಸಿಕವಾಗಿ ಕಿರಿ ಕಿರಿಯಾಗುವುದು ಸೇರಿ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತಿರುವುದು ಗೊತ್ತೇ ಇದೆ. ಆದ್ದರಿಂದ 18 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ತಾಣ ಸೇರಿ ಇತರೆ ವೀಡಿಯೋಗಳನ್ನು ನೋಡುವುದಕ್ಕೆ ಕಡಿವಾಣ ಹಾಕಬೇಕು. ಯಾವುದನ್ನು ನೋಡಬೇಕೆಂಬ ಪಟ್ಟಿ ಮಾಡುವುದು ಅವಶ್ಯಕತೆ ಇದೆ ಎಂದು ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ತಿಳಿಸಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರದ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಶಾಲಾ ಶಿಕ್ಷಣ ಇಲಾಖೆ ಸೇರಿ ಹಲವು ಇಲಾಖೆಗೊಂದಿಗೆ ಸಭೆ ನಡೆಸಲಾಗುತ್ತದೆ. ಬಳಿಕ ಮಕ್ಕಳಿಗೆ ಮಾರಕವಾದ ವೀಡಿಯೋಗಳು ಮತ್ತು ಮಕ್ಕಳ ನಿರ್ಬಂದಿತ ವೀಡೀಯೋಗಳಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.