ತಂದೆ-ತಾಯಿಯ ಸಮಾಧಿ ಮೇಲೆ ದೇವಸ್ಥಾನ ನಿರ್ಮಿಸಿ ನಿತ್ಯ ಪೂಜಿಸುತ್ತಿರುವ ಪುತ್ರ!

Photo of Suresh Talavar
Published on

ಚಿಕ್ಕೋಡಿ: ಅದೆಷ್ಟೋ ಮಕ್ಕಳು ತಮ್ಮ ತಂದೆ-ತಾಯಿಯನ್ನು ಸಾಕಲು ಆಗದೇ ವೃದ್ಧಾಶ್ರಮಕ್ಕೆ ಕಳಿಸುವ ಇಂತಹ ಕಾಲದಲ್ಲಿ ಇಲ್ಲೊಬ್ಬ ಮಗ ಜನ್ಮ ನೀಡಿದ ತಾಯಿ-ತಂದೆಗಾಗಿ ದೇವಸ್ಥಾನ ನಿರ್ಮಿಸಿ, ಅವರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಮೂಲಕ ಇತರಿಗೆ ಆದರ್ಶವಾಗಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಸುರೇಶ್​ ತಳವಾರ ಎಂಬುವರು ತಮ್ಮ ಜಮೀನಿನಲ್ಲಿ ಇರುವ ಅಗಲಿದ ತಂದೆ ಗುರಪ್ಪ ತಳವಾರ ಹಾಗೂ ತಾಯಿ ಪಾರ್ವತಿ ತಳವಾರ ಅವರ ಸಮಾಧಿ ಮೇಲೆ ಪುತ್ಥಳಿ ಸ್ಥಾಪಿಸಿ ದೇವಸ್ಥಾನ ನಿರ್ಮಿಸಿ ಮಾತಾ ಪೀತಾ ಪ್ರೇಮ ಮೆರೆದಿದ್ದಾರೆ‌.

ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹಾಗೂ ಸಮಾಜ ಸೇವಕರಾಗಿರುವ ಸುರೇಶ ತಳವಾರ ಹಾಗೂ ಅವರ ಸಹೋದರರು ಮೊದಲಿನಿಂದಲೂ ತಾಯಿ-ತಂದೆ ಮೇಲೆ ಅಪಾರ ಭಕ್ತಿ ಹೊಂದಿದವರು. 20 ವರ್ಷಗಳ ಹಿಂದೆ ಅವರ ತಂದೆ ಸಾವನ್ನಪ್ಪಿದ್ದರು. ಕಳೆದ ಎರಡು ವರ್ಷದ ಹಿಂದೆ ಅವರ ತಾಯಿ ಸಹ ತೀರಿ ಹೋದರು. ಪ್ರತಿ ವರ್ಷ ಅವರ ಪುಣ್ಯಸ್ಮರಣೆಯಂದು ಸಾವಿರಾರು ಜನರಿಗೆ ಅನ್ನಸಂತರ್ಪನೆ ಮಾಡುತ್ತಿದ್ದರು. ಈ ವರ್ಷ ತಂದೆ-ತಾಯಿ ಸದಾ ನಮ್ಮೊಂದಿಗೆ ಇರಬೇಕು ಎಂಬ ಭಾವನೆಯೊಂದಿಗೆ ಅವರ ದೇವಸ್ಥಾನ ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದಾರೆ.

ನಮ್ಮ ಜೊತೆ ತಂದೆ ತಾಯಿ ಇಲ್ಲದಿದ್ದರೂ ಅವರ ಆದರ್ಶ ಮತ್ತು ಮಾರ್ಗದರ್ಶನ ಸದಾ ನಮ್ಮ ಮೇಲೆ ಇರಬೇಕು ಎಂಬ ದೃಷ್ಟಿಯಿಂದ ದೇವಸ್ಥಾನ ನಿರ್ಮಿಸಿದ್ದೇವೆ. ನಾವಿಂದು ಏನಾದರು ಸಾಧಿಸಿದ್ದರೆ ಅದಕ್ಕೆ ಅವರ ಉತ್ತಮ ಮಾರ್ಗದರ್ಶನ ಹಾಗೂ ಆಶೀರ್ವಾದ ಕಾರಣ. ಎಷ್ಟು ಜನ್ಮ ಎತ್ತಿದರು ಹೆತ್ತವರ ಋಣ ತಿರಿಸಲಾಗದು. ಯಾವ ಮಕ್ಕಳು ತಂದೆ ತಾಯಿರನ್ನು ಕಡೆಗಣಿಸಬೇಡಿ ಎನ್ನುವ ಮನವಿಯನ್ನು ಸುರೇಶ ಮಾಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net