

ಚಿಕ್ಕಮಗಳೂರು: ಮೀನು ಹಿಡಿಯಲು ಹೊಂಡದಲ್ಲಿ ಹಾಕಿದ್ದ ಬಲೆಯಲ್ಲಿ ಹಾವುಗಳು ಸಿಕ್ಕಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಗ್ತಿಹಳ್ಳಿಯಲ್ಲಿ ನಡೆದಿದೆ.
ಮುಗ್ತಿಹಳ್ಳಿ ಸಮೀಪ ಲೋಕೇಶ್ ಎಂಬುವವರಿಗೆ ಸೇರಿದ ಹೊಂಡ ಇದೆ. ಇಲ್ಲಿ ಮೀನುಗಳು ಅಧಿಕವಾಗಿದ್ದು ಅವುಗಳನ್ನು ಹಿಡಿಯಲು ಲೋಕೇಶ್ ಬಲೆ ಬಿಟ್ಟಿದ್ದರು. ಮರು ದಿನ ಬಂದು ಬಲೆಯನ್ನು ನೀರಿನಿಂದ ಎಳೆದಾಗ ಬಲೆಯಲ್ಲಿ ಮೀನಿಗೆ ಬದಲಾಗಿ 4 ಹಾವುಗಳು ಬಲೆಗೆ ಸಿಕ್ಕಿದ್ದವು. ಇದನ್ನು ನೋಡಿ ಗಾಬರಿಗೊಂಡ ಲೋಕೇಶ್ ಬಲೆಯನ್ನು ನೀರಿನಲ್ಲೆ ಬಿಟ್ಟು ಸ್ನೇಕ್ ನರೇಶ್ ಅವರಿಗೆ ಮಾಹಿತಿ ನೀಡಿದರು.
ಕೂಡಲೇ ಸ್ನೇಕ್ ನರೇಶ್ ಸ್ಥಳಕ್ಕೆ ಆಗಮಿಸಿ ಬಲೆಯಲ್ಲಿ ಸಿಕ್ಕಿದ್ದ ಹಾವುಗಳನ್ನು ರಕ್ಷಿಸಿದರು. ಬಲೆಯಲ್ಲಿ 3 ನಾಗರಹಾವು ಹಾಗೂ ಒಂದು ಕೇರೆ ಹಾವು ಸಿಲುಕಿದ್ದವು. ಇವುಗಳಲ್ಲಿ 2 ನಾಗರಹಾವುಗಳು ಸತ್ತಿದ್ದವು. 2 ಹಾವುಗಳನ್ನು ರಕ್ಷಣೆ ಮಾಡಿ ಸ್ಥಳೀಯ ಅರಣ್ಯಕ್ಕೆ ಬಿಟ್ಟರು.
ಲೋಕೇಶ್ ಕುಟುಂಬ ಮೃತಪಟ್ಟ 2 ನಾಗರ ಹಾವುಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿತು. ಅಲ್ಲದೆ ಹೊಂಡದ ಬಳಿ ನಾಗರ ಕಲ್ಲು ನಿರ್ಮಿಸಿ ಪೂಜಿಸುವುದಾಗಿ ಲೋಕೇಶ್ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)