

ಚಿಕ್ಕಮಗಳೂರು: ಪರಿಸರ ಸೂಕ್ಷ್ಮವಲಯ ಘೊಷಣೆ ವಿರೋಧಿಸಿ ನ.9ರಂದು ಖಾಂಡ್ಯ ಹೋಬಳಿಯ ಕಡಬಗೆರೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಸಂಚಾಲಕ ಎಂ.ಜೆ.ಚಂದ್ರಶೇಖರ್ ಹೇಳಿದರು. ಸರ್ಕಾರ ವೇದಿಕೆ ಬೇಡಿಕೆಗಳನ್ನು ಪರಿಗಣಿಸದಿದ್ದರೆ ಗ್ರಾಪಂ ಸೇರಿ ಎಲ್ಲ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಖಾಂಡ್ಯ ಹೋಬಳಿಯ ನಾಲ್ಕು ಗ್ರಾಪಂಗಳ ಜನವಸತಿ ಪ್ರದೇಶ ಉದ್ದೇಶಿತ ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೊಳಪಡಲಿದ್ದು, ಭದ್ರಾ ನದಿಯನ್ನು ಕೇಂದ್ರವಾಗಿರಿಸಿ ಸುಮಾರು 1ರಿಂದ 12.50 ಕಿಮೀ ವ್ಯಾಪ್ತಿಯವರೆಗೆ ಪರಿಸರ ಸೂಕ್ಷ್ಮ ವಲಯವನ್ನು ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಲಕ್ಷಾಂತರ ಕೂಲಿ ಕಾರ್ವಿುಕರು, ವ್ಯಾಪಾರಿಗಳು, ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ. ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದ್ದು ಕಡಬಗೆರೆಯ ಗಾಂಧಿ ಮೈದಾನದಲ್ಲಿ ಅಂದು ಬೆಳಗ್ಗೆ 11ರಿಂದ ಪ್ರತಿಭಟನೆ ಆರಂಭವಾಗಲಿದೆ ಎಂದು ತಿಳಿಸಿದರು.
ಚಂದ್ರಶೇಖರ ರೈ ಮಾತನಾಡಿ, ಮಲೆನಾಡು ಹಲವು ರೀತಿಯ ವಾಣಿಜ್ಯ ಬೆಳೆ ಬೆಳೆಯುವ ಪ್ರದೇಶವಾಗಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ತಂದುಕೊಡುತ್ತಿದೆ. ಲಕ್ಷಾಂತರ ಕಾರ್ವಿುಕರಿಗೆ ಉದ್ಯೋಗ ಒದಗಿಸುತ್ತಿದೆ. ವಾಸ್ತವಿಕ ಅಂಶಗಳನ್ನು ವಿಚಾರಿಸದೆ ಕಸ್ತೂರಿ ರಂಗನ್ ನೇತೃತ್ವದ ತಂಡ ಹೆಲಿಕಾಪ್ಟರ್ನಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಪ್ಪು ವರದಿ ನೀಡಿದ್ದಾರೆ. ಅರಣ್ಯ ಇಲಾಖೆಯೂ ಕೆಲವೇ ಜನರನ್ನು ಒಳಗೊಂಡ ಸಭೆ ನಡೆಸಿ ಅವೈಜ್ಞಾನಿಕ ವರದಿ ಸಲ್ಲಿಸಿದೆ ಎಂದು ದೂರಿದರು.
ವೇದಿಕೆ ಸಂಚಾಲಕ ಎ.ಕೆ.ಸಂದೇಶ್, ಬಿ.ಎ.ಸುರೇಶ್, ಎಸ್.ಐ.ಜಯಶೀಲಾ, ನಟರಾಜ್ ಕಾಸ್ತಿ, ಪ್ರಸಾದ್ ಹೆಗ್ಡೆ, ಎಂ.ಕೆ.ಪ್ರೇಮೇಶ್, ಎಂ.ಎನ್.ರಾಜೇಶ್ ಸುದ್ದಿಗೋಷ್ಠಿಯಲ್ಲಿದ್ದರು.