

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಪ್ರವಾಸಿಗರು ಇಡೀ ದಿನ ಕಳೆಯಲು ಮಲೇಷಿಯಾ, ಡಿಸ್ನಿಲ್ಯಾಂಡ್ ಮಾದರಿಯಂತೆ ಜಿಲ್ಲೆಯಲ್ಲಿ ದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದ ಅಗತ್ಯವಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಹೇಳಿದರು. ಹಾಸನದಿಂದ ಚಿಕ್ಕಮಗಳೂರಿಗೆ ನಾಲ್ಕು ಲೈನ್ ರಸ್ತೆ ನಿರ್ಮಾಣವಾಗಬೇಕಿದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕೈಗಾರಿಕೆಗಳ ಬೆಳವಣಿಗೆ ಸೂಕ್ತ ರಸ್ತೆ ಹಾಗೂ ನೀರಿನ ವ್ಯವಸ್ಥೆಯೂ ಮುಖ್ಯವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳ ಪ್ರದೇಶ ನಿರ್ಮಾಣವಾಗಬೇಕಿದೆ. ಒಣ ಪ್ರದೇಶದಲ್ಲಿನ ಕೈಗಾರಿಕೆ ಬೆಳವಣಿಗೆಗೆ ನೀರು ಒದಗಿಸಬೇಕಾಗಿದ್ದು ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಉಪಾಧ್ಯಕ್ಷರಾದ ಎಂ.ಜಿ.ಬಾಲಕೃಷ್ಣ, ಉಮಾ ರೆಡ್ಡಿ, ಮಾಜಿ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ, ವೆಂಕಟೇಶ್, ಜಿಲ್ಲಾಧ್ಯಕ್ಷ ಶಾಂತರಾಮ್ ಇದ್ದರು.