ಚಿಕ್ಕಬಳ್ಳಾಪುರಕ್ಕೂ ಮೆಟ್ರೋ ಕಲ್ಪಿಸಲು ಒತ್ತಾಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

27CBP4b (1)
Published on

ಚಿಕ್ಕಬಳ್ಳಾಪುರ : ದೇವನಹಳ್ಳಿಯವರೆಗೂ ಬರಲಿರುವ ಮೆಟ್ರೋ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರ ನಗರಕ್ಕೂ ವಿಸ್ತರಿಸುವಂತಾಗಲು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಒಕ್ಕಲಿಗರ ಸಂಘ ಭಾನುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ಎಂದಿಗೂ ಜಾತಿ, ಜನಾಂಗ, ಮತಭೇದ ತೋರಲಿಲ್ಲ. ಒಬ್ಬ ರಾಜನಾಗಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಚಿಂತನೆಯೊಂದಿಗೆ ಆಡಳಿತ ನಡೆಸಿದರು. ಎಲ್ಲರಿಗೂ ಉಪಯೋಗವಾಗುವ ಕೆಲಸಗಳಿಗೆ ಆದ್ಯತೆ ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿಕ್ಕ ಹಳ್ಳಿಯಾಗಿದ್ದ ಬೆಂದಕಾಳೂರನ್ನು ಸುಂದರ, ವೈಜ್ಞಾನಿಕ ಮಹಾನಗರವನ್ನಾಗಿಸಿದ ಕೀರ್ತಿ ಕೆಂಪೇಗೌಡರವರಿಗೆ ಸಲ್ಲುತ್ತದೆ, ಅವರನ್ನು ಆದರ್ಶವಾಗಿ ಸ್ವೀಕರಿಸಿ, ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ನಗರವನ್ನು ಬೆಳೆಸಬೇಕಾಗಿದೆ ಎಂದರು.

ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ನೀರಾವರಿ ಕ್ಷೇತ್ರಗಳಿಗೆ ವಿಶೇಷ ಒತ್ತು ಕೊಡಲಾಗಿದೆ. ಎಚ್.ಎನ್.ವ್ಯಾಲಿ ಸಂಸ್ಕರಿಸಿದ ನೀರನ್ನು ಈ ಭಾಗದ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲಾಗುತ್ತಿದೆ. ಆದಷ್ಟು ಬೇಗ ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಿಲ್ಲೆಯ ದಿಬ್ಬೂರು, ಮಂಡಿಕಲ್ಲು ಮತ್ತು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 28 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುದಾನ ಮಂಜೂರಾಗಿದೆ. ನಂದಿ, ಬೊಮ್ಮನಹಳ್ಳಿ ಮತ್ತು ನಾಯನಹಳ್ಳಿಯಲ್ಲಿ ಆರೋಗ್ಯ ಧಾಮಗಳನ್ನು ನಿರ್ಮಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಕನಿಷ್ಠ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಎಲ್ಲ ಮತ ಪಂಥಗಳನ್ನು ಮೀರಿ ಬೆಳೆದವರು. 500 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಪೂರಕ ವಾತಾವರಣ ನಿರ್ಮಿಸಿದರು. ಇವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳ ಕುರಿತು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ವಿಶೇಷ ಉಪನ್ಯಾಸ ನೀಡಿದರು.

ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮುಖಂಡರಾದ ಯಲುವಳ್ಳಿ ರಮೇಶ್, ಬಿ.ಎನ್.ಚನ್ನಪ್ಪರೆಡ್ಡಿ, ಖಜಾಂಚಿ ಬಿ.ಕೆ.ಮಂಜುನಾಥ್ ಮತ್ತಿತರರು ಇದ್ದರು.

ರೈತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ : ಪ್ರಗತಿಪರ ರೈತರಾದ ನಂಜುಂಡಪ್ಪ, ಕೆ.ಆರ್.ಸುರೇಂದ್ರಗೌಡ, ಬಾಬು, ಸುಬ್ಬಾರೆಡ್ಡಿ, ದೇವರಾಜು, ಜಯಣ್ಣ, ರಾಜಣ್ಣ, ಮುನಿರೆಡ್ಡಿ, ಕೆ.ರಾಮಲಿಂಗರಾಜು, ಶ್ರೀನಿವಾಸರೆಡ್ಡಿ, ಸಹದೇವ ರೆಡ್ಡಿ, ಮುಕ್ತಂಬ, ಪ್ರಮೀಳಮ್ಮ, ಪಿ.ಎನ್. ವೇಣುಗೋಪಾಲ್, ಆರ್.ವಿ.ಮಂಜುನಾಥ್ ರೆಡ್ಡಿ ಮತ್ತು ನರಸರೆಡ್ಡಿ ಎಂಬುವವರನ್ನು ಸನ್ಮಾನಿಸಲಾಯಿತು. 2019-20 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

47 ಲ್ಯಾಪ್ ಟ್ಯಾಪ್ ವಿತರಣೆ :  ಸಚಿವ ಡಾ ಕೆ.ಸುಧಾಕರ್ ಒಡೆತನದ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನಿಂದ 47 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗಿಲ್ಲ. ಭೌತಿಕ ತರಗತಿಗಳು ನಡೆಯುತ್ತಿಲ್ಲ. ಇದಕ್ಕೆ ಆನ್ ಲೈನ್ ತರಗತಿ, ಡಿಜಿಟಲ್ ಶಿಕ್ಷಣವನ್ನು ಪಡೆಯುವ ನಿಟ್ಟಿನಲ್ಲಿ ಲ್ಯಾಪ್‌ಟಾಪ್ ಸಹಕಾರಿ ಎಂದು ಸಚಿವರು ತಿಳಿಸಿದರು.ಪ್ ಟ್ಯಾಪ್ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net