ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್​ ಈಶ್ವರ್​ಗೆ ಮಾತೃವಿಯೋಗ: ಸಾಕುತಾಯಿ ನಿಧನ

Pradeep Eshwar (1)
Published on

ಚಿಕ್ಕಬಳ್ಳಾಪುರ: ಬಿಜೆಪಿಯ ಪ್ರಬಲ ನಾಯಕ ಹಾಗೂ ಮಾಜಿ ಸಚಿವ ಕೆ.ಸುಧಾಕರ್​ ವಿರುದ್ಧ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದಿಂದ ಕಣಕ್ಕಿಳಿದು ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್​ ಈಶ್ವರ್​ಗೆ ಇಂದು ಮಾತೃವಿಯೋಗ ಆಗಿದೆ.

ಪ್ರದೀಪ್​ ಈಶ್ವರ್​ ಅವರ ಸಾಕು ತಾಯಿ ರತ್ನಮ್ಮ ಅವರು ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು (ಮೇ 20) ಬೆಳಗ್ಗೆ ಪೇರೇಸಂದ್ರ ಗ್ರಾಮದಲ್ಲಿ ರತ್ಮಮ್ಮ (72) ಅವರು ಕೊನೆಯುಸಿರೆಳೆದಿದ್ದಾರೆ.

ಸಾಕು ತಾಯಿ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಪ್ರಮಾಣ ವಚನ ಕ್ರಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬಂದಿದ್ದ ಪ್ರದೀಪ್​ ಈಶ್ವರ್​ ವಾಪಸ್​ ಪೇರೇಸಂದ್ರ ಗ್ರಾಮಕ್ಕೆ ಮರಳಿದ್ದು, ತಾಯಿಯ ಅಂತಿಮ ದರ್ಶನವನ್ನು ಪಡೆದು ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಪ್ರದೀಪ್​ ಈಶ್ವರ್​ ಶಾಸಕರಾಗಿ ಆಯ್ಕೆಯಾದ ದಿನದಿಂದ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್​ ಸರ್ಕಾರ ಇನ್ನು ರಚನೆಯಾಗದಿದ್ದರೂ ಕ್ಷೇತ್ರದಲ್ಲಿ ಜನರ ಜೊತೆ ನಿಕಟ ಸಂಪರ್ಕ ಬೆಳೆಸುತ್ತಿರುವ ಪ್ರದೀಪ್​ ಈಶ್ವರ್​, ಮನೆಗೆ ಮನೆಗಳಿಗೆ ತೆರಳಿ ಕ್ಷೇತ್ರದ ಜನರ ಕಷ್ಟ-ಸುಖಗಳನ್ನು ಆಲಿಸುತ್ತಿದ್ದಾರೆ. ಅಲ್ಲದೆ, ಸ್ಥಳದಲ್ಲೇ ಪರಿಹಾರವನ್ನು ನೀಡುವ ಮೂಲಕ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಪರಿಹರಿಸುವ ಭರವಸೆಯನ್ನು ನೀಡುವ ಮೂಲಕ ಜನನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.

ಪ್ರದೀಪ್​ ಈಶ್ವರ್​ ಅವರು ಮನೆ ಮನೆಗೆ ತೆರಳಿ ಜನರೊಂದಿಗೆ ಮಾತನಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಪ್ರದೀಪ್​ ಈಶ್ವರ್​ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನೊಂದೆಡೆ ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಲದೆ, 8 ಸಚಿವರು ಕೂಡ ಪದಗ್ರಹಣ ಮಾಡಲಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಮಧ್ಯಾಹ್ನ 12.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net