

ಲಕ್ಕೂರು: ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 24 ಗ್ರಾಂ ಚಿನ್ನ, 187 ಗ್ರಾಂ ಬೆಳ್ಳಿ ಹಾಗೂ ಚಿಲ್ಲರೆ ಹಣ ಸೇರಿ ಒಟ್ಟು 24.36 ಲಕ್ಷ ರೂ. ಸಂಗ್ರಹವಾಗಿದೆ.
ಕರೊನಾ ಸಂಕಷ್ಟದ ನಡುವೆಯೂ ದೇವಾಲಯಕ್ಕೆ ಜುಲೈನಿಂದ ಡಿ.28ರವರೆಗೂ ಭಕ್ತರು ಅರ್ಪಿಸಿರುವ ನಗದು, ಚಿನ್ನ, ಬೆಳ್ಳಿ ಸೇರಿ ನೋಟುಗಳ ಎಣಿಕೆ ಕಾರ್ಯ ನಡೆಯಿತು. ಹಣವನ್ನು ಇಂಡಿಯನ್ ಓವರಸೀಸ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಎಣಿಕೆಗೂ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇಗುಲ ಆವರಣದಲ್ಲಿದ್ದ ಹುಂಡಿಗಳನ್ನು ಜಿಲ್ಲಾ ಮುಜರಾಯಿ ತಹಸೀಲ್ದಾರ್ ನಾಗವೇಣಿ ಹಾಗೂ ದೇವಾಲಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ತೆರೆದು ಎಣಿಕೆ ಮಾಡಲಾಯಿತು.
ಚಿಲ್ಲರೆ ಹಣ ಹೆಚ್ಚಾಗಿದ್ದ ಕಾರಣ ತಡರಾತ್ರಿ 10 ಗಂಟೆಯವರೆಗೂ ಎಣಿಕೆ ನಡೆಯಿತು. ಕಂದಾಯ ಇಲಾಖೆ ಸಿಬ್ಬಂದಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ದೇವಾಲಯ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು. ಎಣಿಕೆ ವೇಳೆ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಲಕ್ಕೂರು ಠಾಣೆ ಸಿಬ್ಬಂದಿ ವೆಂಕೊಬ್‌ರಾವ್ ಬಂದೋಬಸ್ತ್ ಕೈಗೊಂಡಿದ್ದರು.