ಬೆಂಗಳೂರು:
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂಥ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಿತ ಯೋಜನೆ ಆದ ರೇವಾ ಸಂಶೋಧನಾ ಕೇಂದ್ರದಿಂದ ಈಚೆಗೆ ಚಿಕ್ಕಬಳ್ಳಾಪುರದಲ್ಲಿ ವಿಜ್ಞಾನ ತಂತ್ರಜ್ಞಾನ ಮತ್ತು ನಾವೀನ್ಯತೆ (ಸೈನ್ಸ್ ಟೆಕ್ನಾಲಜಿ ಅಂಡ್ ಇನೊವೇಷನ್-ಎಸ್ ಟಿಐ) ಹಬ್ ಉದ್ಘಾಟನೆಗೊಂಡಿದೆ.
ಅಗತ್ಯವಾದ ಸೌಲಭ್ಯಗಳನ್ನು ಪ್ರಾಯೋಜಿಸುವ, ಅಷ್ಟೇ ಅಲ್ಲ, ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗಳ ಮೂಲಕ ರೈತ ಸಮುದಾಯವನ್ನು ಬೆಂಬಲಿಸುವ ಗುರಿಯನ್ನು ಕೂಡ ಇರಿಸಿಕೊಳ್ಳಲಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮತ್ತು ಚಿಕ್ಕಬಳ್ಳಾಪುರದ ಆಯ್ದ ಹಳ್ಳಿಗಳ ಆರ್ಥಿಕ ದುರ್ಬಲ ವರ್ಗದವರ ಬೆಳವಣಿಗೆ ಮೇಲೆ ಎಸ್ ಟಿಐ ಹಬ್ ಗಮನವನ್ನು ಕೇಂದ್ರೀಕರಿಸುತ್ತದೆ.
ಈ ಎಸ್ ಟಿಐ ಹಬ್ ಪ್ರಮುಖ ವಿಚಾರಗಳಲ್ಲಿ ಪಾಲ್ಗೊಳ್ಳುವ ಮೂಲಕ ರೈತರು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸುವ ಕಡೆಗೆ ಕೆಲಸ ಮಾಡುವ ಗುರಿ ಇರಿಸಿಕೊಂಡಿದೆ. ಕೃಷಿ ಉತ್ಪನ್ನಗಳಿಗೆ ಹೈಬ್ರಿಡ್ ಪ್ಯಾಸಿವ್ ಸೋಲಾರ್ ಡ್ರೈಯರ್, ಸಂಯೋಜಿತ ಹಸಿರು ತಂತ್ರಜ್ಞಾನ ಆಧಾರಿತ ನೀರು ಶುದ್ಧೀಕರಣ ವ್ಯವಸ್ಥೆಯ ನಿರ್ಮಾಣ, ಸಣ್ಣ ಪ್ರಮಾಣದ ವಿವಿಧೋದ್ದೇಶ ಹಣ್ಣು ಮತ್ತು ಕೃಷಿ
ಉತ್ಪನ್ನಗಳ ಸಂಸ್ಕರಣಾ ವ್ಯವಸ್ಥೆಗಳ ಅಳವಡಿಕೆ, ಹೈಬ್ರಿಡ್ ಸಿಲ್ಕ್ ರೀಲಿಂಗ್ ಹಾಗೂ ಸ್ಪಿನ್ನಿಂಗ್ ಮಶೀನ್‌ಗಳ ಅಭಿವೃದ್ಧಿ, ಜೈವಿಕ- ಬ್ರಿಕೆಟ್‌ಗಳ ಉತ್ಪಾದನೆ ಮತ್ತು ಐಒಟಿ ಸಕ್ರಿಯಗೊಂಡ ದ್ರಾಕ್ಷಿ ಬೆಳೆ ಮುನ್ಸೂಚನೆ ವ್ಯವಸ್ಥೆ ಇಂಥ ಉದ್ದೇಶಗಳನ್ನು ಎಸ್ ಟಿಐ ಇರಿಸಿಕೊಂಡಿದೆ.
ಇವೆಲ್ಲದರ ಜತೆಗೆ ಬಳಕೆಯಾಗದೆ ಉಳಿದ ಬಯೋಮಾಸ್ ಅನ್ನು ಇಂಧನ ಬ್ರಿಕೆಟ್‌ಗಳಾಗಿ ಪರಿವರ್ತಿಸಿ, ಪರಿಸರ- ಸ್ನೇಹಿ ಮತ್ತು ಆರ್ಥಿಕವಾಗಿ ಕಾರ್ಯಸಾಧು ಆಗುವಂತಹ ಜಿಯೋಪಾಲಿಮರ್ ಬ್ಲಾಕ್‌ಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಕೃಷಿ ತ್ಯಾಜ್ಯಗಳನ್ನು ಮೌಲ್ಯವರ್ಧಿತ ಅನುಷ್ಠಾನದೊಂದಿಗೆ ರಸಗೊಬ್ಬರ ಉತ್ಪಾದಿಸುವುದಕ್ಕೆ ಹೇಗೆ ಬಳಸಬೇಕು ಎಂಬುದನ್ನು ತರಬೇತಿ ಹಾಗೂ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಆರ್ಥಿಕವಾಗಿ ಕಷ್ಟದಲ್ಲಿರುವಂಥ ಸಮುದಾಯವನ್ನು ಈ ಮೂಲಕವಾಗಿ ಎಸ್ ಟಿಐ ಹಬ್ ಸಬಲಗೊಳಿಸುತ್ತದೆ.
ಈ ಹಬ್ ಸ್ಥಾಪಿಸುವುದಕ್ಕೂ ಮುಂಚಿತವಾಗಿ, ಸಮುದಾಯ ಭೇಟಿ ಹಾಗೂ ವೈದ್ಯಕೀಯ ಶಿಬಿರಗಳಲ್ಲಿ ಚಿಕ್ಕಬಳ್ಳಾಪುರದ ಕೃಷಿ ಸಮುದಾಯದವರು ಹಲವಾರು ಪ್ರಮುಖ ವಿಚಾರಗಳನ್ನು ತಿಳಿಸಿದ್ದರು. ಸಮುದಾಯಕ್ಕೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಈ ಹಬ್ ಕೆಲವು ಸಮಸ್ಯೆಗಳನ್ನು ಬಗೆಹರಿಸುತ್ತದೆ.
ಈ ಎಸ್ ಟಿಐ ಹಬ್ ರೈತರಿಗೆ ಮತ್ತು ಸ್ಥಳೀಯ ಸಮುದಾಯಕ್ಕೆ ಜಾಗೃತಿ ಮೂಡಿಸುವುದು, ತರಬೇತಿ ನೀಡುವುದು ಮತ್ತು ಉತ್ಪನ್ನ ಅಭಿವೃದ್ಧಿ ಹಾಗೂ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುವುದು ಸೇರಿ ಮಹತ್ವದ ಯೋಜನಾ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ.
ಈ ಯೋಜನೆಯು ರೈತ ಸಮುದಾಯದ ಜೀವನೋಪಾಯ ಸುಧಾರಿಸಲು, ಸ್ಥಳೀಯ ಸಂಪನ್ಮೂಲಗಳ ಪರಿಣಾಮಕಾರಿ ಮತ್ತು ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ಹಾಗೂ ಪೂರೈಕೆ ಸರಪಳಿ (ಸಪ್ಲೈ ಚೈನ್) ಮತ್ತು ಉತ್ಪನ್ನಗಳನ್ನು ಹೆಚ್ಚೆಚ್ಚು ಮಾರುಕಟ್ಟೆ ತಲುಪಿಸುವುದಕ್ಕೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಈ ಉಪಕ್ರಮಗಳ ಮೂಲಕ ಅಭಿವೃದ್ಧಿಪಡಿಸಲಾದ ಉತ್ಪನ್ನಗಳ
ಮಾರುಕಟ್ಟೆಯನ್ನು ಹಬ್ ಸುಗಮಗೊಳಿಸುತ್ತದೆ, ಸಂಘಟಿಸುತ್ತದೆ ಮತ್ತು ಪ್ರಚಾರ ಮಾಡುತ್ತದೆ.