ಡೆಂಘಿ ಪ್ರಕರಣ ಹೆಚ್ಚಳ; ಭಯ ಬೇಡ, ಜಾಗೃತೆಯಿರಲಿ…ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

siddaramaiah
Published on

ಬೆಂಗಳೂರು: ರಾಜ್ಯಾದ್ಯಂತ ಕಳೆದ ಕೆಲವು ದಿನಗಳ ಅವಧಿಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಘಿ ಪ್ರಕರಣಗಳು ವರದಿಯಾಗಿರುವುದರಿಂದ ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಗೆ ಆದ್ಯತೆ ನೀಡಿ, ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

4 ಸಾವಿರಕ್ಕೂ ಅಧಿಕ ಡೆಂಘಿ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ. ಡೆಂಘಿ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಚಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಡೆಂಘಿ ಬಗ್ಗೆ ಭಯ ಬೇಡ, ಜಾಗೃತೆಯಿರಲಿ ಎಂದು ಸಿದ್ದರಾಮಯ್ಯ ಅವರು ಈ ಬಗ್ಗೆ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮೊಬೈಲ್ ಆಪ್
ರಾಜ್ಯ ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆರ್ಚ್‌ ಪಾರ್ಕ್ ಸಹಭಾಗಿತ್ವದಲ್ಲಿ ಡೆಂಘಿ ಮತ್ತಿತರ ರೋಗಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ನೆರವಾಗುವ ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್‌ ಹಾಗೂ PRISM-H ಮೊಬೈಲ್‌ ಅಪ್ಲಿಕೇಶನ್‌ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಐಐಎಸ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಚಾಲನೆ ನೀಡಿದರು.

ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ತಂತ್ರಜ್ಞಾನ ಉಪಯೋಗಿಸಿಕೊಂಡು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ನಮ್ಮ ಉದ್ದೇಶ. ಆ್ಯಪ್‌ ಬಿಬಿಎಂಪಿಗೆ ಸೀಮಿತವಾದರೆ ಡ್ಯಾಶ್‌ಬೋರ್ಡ್‌ ರಾಜ್ಯಾದ್ಯಂತ ಎಲ್ಲಾ ಆರೋಗ್ಯ ಅಧಿಕಾರಿಗಳಿಗೂ ನೆರವಾಗಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net