ಆಲೋಚನೆಗಳ ಮೂಲ ಯಾವುದು ಎಂದರೆ ಚಿದಾಕಾಶವೇ!

on
Published on
ಆಲೋಚನೆಗಳು ಎಲ್ಲಿಂದ ಬರುತ್ತವೆ ಎಂಬ ಪ್ರಶ್ನೆ. ಈ ಪ್ರಶ್ನೆಯೂ ಒಂದು ಆಲೋಚನೆಯೆ. ಇದು ಎಲ್ಲಿಂದ ಬಂದಿತು? ಇದರ ಮೂಲವೇನು? ಎಂದು ನೀವಾಗಿಯೇ ಕಂಡುಕೊಳ್ಳಬಹುದು. ಹಾಗೆ ಕಂಡುಕೊಳ್ಳಲು ಹೋದಾಗ ಮನಸ್ಸು ಖಾಲಿಯಾಗುತ್ತದೆ. ಆ ಖಾಲಿತನದಿಂದ, ಆಕಾಶದಿಂದ ಎಲ್ಲವೂ ಬರುತ್ತಿದೆ. ನೀವೇ ಮೂಲ, ಎಲ್ಲದರ ಮೂಲ, ಆಂತರಿಕ ಆಕಾಶ. ಮೋಡಗಳು ಎಲ್ಲಿಂದ ಬರುತ್ತಿವೆ? ಎಂದು ಕೇಳಿದಂತೆಯೇ ಇದು. ಮೋಡಗಳು ಆಕಾಶದಲ್ಲಿ ತೇಲುತ್ತಿವೆ. ಅದೇ ರೀತಿಯಾಗಿ ನಮ್ಮ ಆಂತರಿಕ ಆಕಾಶದಲ್ಲಿ ಆಲೋಚನೆಗಳು ತೇಲುತ್ತಿವೆ.

ಮೂರು ರೀತಿಯ ಆಕಾಶಗಳಿವೆ : 1) ಬಾಹ್ಯಾಕಾಶ ಅಥವಾ ಭೌತಿಕ ಆಕಾಶ. 2) ಆಂತರಿಕ ಆಕಾಶ ಮತ್ತು ಮೂರನೆಯ ಆಕಾಶ ಇದಕ್ಕೂ ಸಾಕ್ಷಿಯಾಗಿದೆ. ಅದೇ 3) ಚಿದಾಕಾಶ, ಆನಂದ. ಈ ಮನಸ್ಸನ್ನು ಗೆಲ್ಲುವುದು ಹೇಗೆ ಎಂಬ ಪ್ರಶ್ನೆಯೂ ಬರುತ್ತದೆ. ಮನಸ್ಸನ್ನು ಏಕೆ ಗೆಲ್ಲ ಬಯಸುತ್ತೀರಿ? ಮನಸ್ಸು ತೊಂದರೆ ಕೊಡುತ್ತದೆ ಎಂದೇ? ಅದು ಅದರ ಸ್ವಭಾವ! ನೀವು ನಿಮ್ಮ ಮನಸ್ಸಿಗಿಂತಲೂ ದೊಡ್ಡವರೆಂದು ನಿಮಗೆ ಗೊತ್ತೆ? ಇದನ್ನು ತಿಳಿದುಕೊಳ್ಳಿ, ಅಷ್ಟೆ! ಕಾಲ ಎಂದರೇನು? ಎರಡು ಘಟನೆಗಳ ನಡುವಿನ ಅಂತರ, ಎರಡು ವಸ್ತುಗಳ ನಡುವೆ ಇರುವ ಆಕಾಶ. ಮನಸ್ಸಿನ ಮೂಲಕ್ಕೆ ಹೇಗೆ ತೆರಳುವುದು? ಮೌನವಾಗಿ ಇರುವುದರಿಂದ. ಕಲಿತದ್ದನ್ನು ಮರೆಯುವುದರಿಂದ, ವಿಶ್ರಾಂತಿಯಿಂದ ಮೂಲಕ್ಕೆ ತೆರಳಬಹುದು.

ಆತ್ಮಕ್ಕೊಂದು ಗುರಿಯಿದೆಯೆ? ಖಂಡಿತವಾಗಿಯೂ ಹೌದು. ಪರಮಾತ್ಮವಾಗುವ ಗುರಿಯನ್ನು ಹೊಂದಿದೆ. ಪರಮಾತ್ಮದೊಡನೆ ಮಿಲನವಾಗುವ ಗುರಿಯನ್ನು ಹೊಂದಿದೆ. ಸಣ್ಣ ಮನಸ್ಸು ದೊಡ್ಡ ಮನಸ್ಸಾಗುವ ಗುರಿಯನ್ನು ಹೊಂದಿದೆ. ಪ್ರತಿಯೊಂದು ಅಲೆಯು ಸಮುದ್ರದ ದಡದ ಮೇಲೆ ಹರಿದು ಸಮುದ್ರದೊಡನೆ ಒಂದಾಗಲು ಬಯಸುತ್ತದೆ. ಆ ಅಲೆಯು ಈಗಾಗಲೇ

ಸಮುದ್ರವಾಗಿದೆ! ನಮ್ಮೆಲ್ಲರ ಜೀವನಕ್ಕೂ ಒಂದು ಉದ್ದೇಶವಿರುತ್ತದೆ. ಕೆಲವೊಮ್ಮೆ ದಾರಿ ತಪ್ಪಿ ನಡೆಯುತ್ತೇವೆ, ಆದರೆ ಅದೃಷ್ಟವಿದ್ದರೆ ಮತ್ತೆ ದಾರಿಗೆ ಬರುತ್ತೇವೆ. ದಾರಿ ತಪ್ಪಿ ಹೋದಾಗ, ದುಃಖಿಯಾಗಿರುವ ಸಮಯ ಬಂದಾಗಿದೆ ಎಂದಾಯಿತು. ದುಃಖಿಗಳಾಗುತ್ತೇವೆ ಮತ್ತು ಇದಕ್ಕೆ ವಿರುದ್ಧವಾದ ಅನುಭವ ಬೇಕು ಎನಿಸುತ್ತದೆ. ಆಗ ಮತ್ತೆ ದಾರಿಗೆ ಮರಳಿ ಬರುತ್ತೇವೆ. ಆಶ್ರಮದಂತಹ ಸ್ಥಳಕ್ಕೆ ಬಂದರೆ ಇಲ್ಲಿ ಧ್ಯಾನ ಆಗುತ್ತಲಿರುವುದರಿಂದ ಆ ಸ್ಥಳವು ಧ್ಯಾನದ ಕಂಪನಗಳನ್ನು ಹೊಂದಿರುತ್ತದೆ. ಮನೆಯು ನಮ್ಮದಾದರೂ, ಊಟದ ಕೋಣೆಯಿದೆ, ವಿಶ್ರಾಂತಿ ಪಡೆಯುವ ಸ್ಥಳವಿದೆ, ಕಸವನ್ನು ಇಡುವ ಸ್ಥಳವಿದೆ. ಎಲ್ಲದಕ್ಕೂ ಒಂದು ಸ್ಥಳವಿದೆ. ಅದೇ ರೀತಿಯಾಗಿ ಜಗತ್ತಿನಲ್ಲೂ ಎಲ್ಲದಕ್ಕೂ ಒಂದು ಸ್ಥಳವಿದೆ. ಆ ಸ್ಥಳವೂ ಕಂಪನವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮೆಲ್ಲರ ಮನೆಯೂ ಆಶ್ರಮವಾಗಬೇಕು.

ಆಶ್ರಮ ಎಂದರೇನು? ಎಲ್ಲಿ ಜ್ಞಾನವಿದೆಯೊ, ಎಲ್ಲಿ ಪ್ರೇಮವಿದೆಯೊ, ಬಂದವರಿಗೆ ತಿನ್ನಲು ಏನಾದರೂ ಕೊಟ್ಟರೆ, ನಿಮ್ಮ ಮನೆಗೆ ಬಂದವರಿಗೆ ವಿಶ್ರಾಂತಿಯ ಭಾವನೆ ಸಿಕ್ಕರೆ ಇಡೀ ಜಗತ್ತು ಆಶ್ರಮವಾಗುತ್ತದೆ. ಪ್ರಕೃತಿಯೊಡನಿದ್ದರೆ, ಕಾಡಿನಲ್ಲಿದ್ದರೆ, ಅದೆಲ್ಲವೂ ಆಶ್ರಮವೇ. ಜಗತ್ತಿನ ಪ್ರತಿಯೊಂದು ಮರವೂ ನನ್ನದೇ ತೋಟದಲ್ಲಿದೆ ಎಂದು ಭಾವಿಸಿ. ಇದು ವಾಸ್ತವ. ಆದರೆ ಕೆಲವೊಮ್ಮೆ ಇದರಿಂದ ಸಹಾಯವಾಗುತ್ತದೆ ಅನಿಸದಿದ್ದರೆ, ನಿಮ್ಮನ್ನು ಪುನಶ್ಚೇತಗೊಳಿಸಿಕೊಳ್ಳಲು ಒಂದು ಸ್ಥಳಬೇಕು ಅನಿಸಿದರೆ, ಆಗ ಆಶ್ರಮಕ್ಕೆ ಬಂದರೆ ಎಲ್ಲವೂ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ನಿಮ್ಮ ಮನೆಯಲ್ಲಿ ನೀವು ಎಲ್ಲಿ ಬೇಕಾದರೂ ಇರಬಹುದು, ಆದರೆ ಅಡುಗೆಯ ವಾಸನೆಯನ್ನು ಪಡೆದುಕೊಳ್ಳಬೇಕಾದರೆ ಅಡುಗೆ ಮನೆಗೇ ಹೋಗಬೇಕು ಅಲ್ಲವೇ?. ಎಲ್ಲಿ ಬೇಕಾದರೂ ತಿನ್ನಬಹುದು. ಆದರೆ ಆ ವಾಸನೆ ಇರುವುದು ಅಡುಗೆಯ ಮನೆಯಲ್ಲಿ. ಇಷ್ಟೆಲ್ಲಾ ಮಾಡಿದರೂ ನಮ್ಮ ವಿಶ್ವಾಸ ಅಲುಗಾಡಬಹುದು. ವಿಶ್ವಾಸವು ನಿಜವಾಗಿದ್ದರೆ ಅಲುಗಾಡಲಿಬಿಡಿ. ಸತ್ಯವು ಎಂದಿಗೂ ಹೊರಟುಹೋಗುವುದಿಲ್ಲ. ವಿಶ್ವಾಸ ಸತ್ಯವಾಗಿದ್ದರೆ ಅಲುಗಾಡಲಿ. ಅದೆಂದಿಗೂ ಕಳೆದು ಹೋಗುವುದಿಲ್ಲ. ಎಷ್ಟು ಬೇಕೊ ಅಷ್ಟು ಸಂಶಯಿಸಿ. ಸಂಶಯದ ಬಗ್ಗೆ ಹೆದರಬೇಕಿಲ್ಲ. ಚಿನ್ನ ಅಪ್ಪಟವಾಗಿದ್ದರೆ, ಅದನ್ನು ಎಷ್ಟು ಉಜ್ಜಿದರೂ ಚಿನ್ನವಾಗಿಯೇ ಇರುತ್ತದೆ. ಅದು ನಕಲಿ ಅಥವಾ ಚಿನ್ನದ ಪಾಲೀಷನ್ನು ಮಾತ್ರ ಹೊಂದಿದ್ದರೆ, ಬಹಳ ಉಜ್ಜಬೇಡ ಎನ್ನುತ್ತೀರಿ. ಬಹಳ ಉಜ್ಜಿದರೆ ಚಿನ್ನ ಮಾಯವಾಗುತ್ತದೆ. ಆದರೆ ಎಷ್ಟು ಉಜ್ಜಿದರೂ ನಿಜವಾದ ಚಿನ್ನ ಮಾಯವಾಗುವುದಿಲ್ಲ. ಸಂಶಯ ಎಂದರೆ ಕೇವಲ ಪ್ರಾಣದ ಅಭಾವ. ಬಹಳ ಶಕ್ತಿಯಿದ್ದಾಗ ಸಂಶಯವೆಲ್ಲಿರುತ್ತದೆ? ಕೆಳಮಟ್ಟದ ಶಕ್ತಿಯಿಂದ ಸಂಶಯ ಉಂಟಾಗುತ್ತದೆ. ನಿಜವಾದ ವಿಶ್ವಾಸವೆಂದರೆ, ನೂರು ಸಲ ಅಲುಗಾಡಿದರೂ ಅಚಲವಾಗಿ ಉಳಿಯುವಂಥದ್ದು. ಇಡೀ ಜಗತ್ತು ಕಂಪನಗಳು ಮತ್ತು ನಮ್ಮ ಕಂಪನಗಳು ಸದಾ ಬದಲಿಸುತ್ತಿರುತ್ತವೆ, ಪ್ರತಿ ಕ್ಷಣ ಬದಲಾಯಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net