ಮಾರ್ಚ್​, ಏಪ್ರಿಲ್​ನ ಶುಲ್ಕ ಸಂಗ್ರಹಿಸದಂತೆ ಶಾಲೆಗಳಿಗೆ ಜಿಲ್ಲಾಧಿಕಾರಿ ಆದೇಶ, ನಿರಾಳತೆ ಮೂಡಿದ್ದು ಯಾವ ಜಿಲ್ಲೆಯ ಜನರಿಗೆ?

No School fee
Published on

ಚಿಂದ್ವಾರಾ: ಖಾಸಗಿ ಶಾಲೆಗಳಲ್ಲಿ ಸಾಮಾನ್ಯವಾಗಿ ವರ್ಷದ ಪ್ರವೇಶ ಶುಲ್ಕ, ಸಾರಿಗೆ ವೆಚ್ಚ ಹಾಗೂ ಇತರ ಶುಲ್ಕಗಳನ್ನು ಒಂದೇ ಬಾರಿಗೆ ಅಥವಾ ಒಂದೆರಡು ಕಂತುಗಳಲ್ಲಿ ಸಂಗ್ರಹಿಸುವ ಪರಿಪಾಠವಿದೆ. ಕೆಲವೆಡೆ ಮೂರು ಅಥವಾ ನಾಲ್ಕು ತಿಂಗಳ ಅವಧಿಗೆ ವಿಭಜಿಸಿ ಮೂರು ಅಥವಾ ನಾಲ್ಕು ಬಾರಿ ಪಡೆಯಲಾಗುತ್ತದೆ. ಕೆಲವೆಡೆ ಪ್ರತಿ ತಿಂಗಳು ಸಂಗ್ರಹಿಸುವ ಪದ್ಧತಿಯೂ ಇದೆ.

ಸದ್ಯ ಕರೊನಾ ಸಂಕಷ್ಟದಿಂದಾಗಿ ಎರಡು ತಿಂಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಶಾಲಾ- ಕಾಲೇಜುಗಳು ಬಂದ್​ ಆಗಿವೆ. ವಿದ್ಯಾರ್ಥಿಗಳು ಮನೆಯಲ್ಲಿದ್ದಾರೆ. ಹೀಗಾಗಿ ಶಾಲೆಗಳು ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳ ಶಾಲಾ ಶುಲ್ಕವನ್ನು ಸಂಗ್ರಹ ಮಾಡುವಂತಿಲ್ಲ ಎಂದು ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಾತ್ರವಲ್ಲ, ಮಕ್ಕಳು ಮನೆಯಲ್ಲಿರುವ ಕಾರಣ ಆನ್​ಲೈನ್​ ಪಾಠದ ನೆಪದಲ್ಲಿ ಶುಲ್ಕ ವಿಧಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಯಾವುದೇ ಶಾಲೆಗಳು ಶುಲ್ಕ ಸಂಗ್ರಹಿಸದಂತೆ ನಿಗಾ ವಹಿಸಬೇಕೆಂದು ಶಿಕ್ಷಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಕರೊನಾದಿಂದಾಗಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ವೇತನ ಕಡಿತವಾಗಿದೆ, ಕಂಪನಿಗಳು ವೇತನರಹಿತ ರಜೆ ಘೋಷಿಸಿವೆ. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶ ಸ್ಥಳೀಯರಲ್ಲಿ ಕೊಂಚ ನಿರಾಳತೆ ಮೂಡಿಸಿದೆ.
ಕರ್ನಾಟಕದಲ್ಲಿ ಇಂಥ ಆದೇಶ ನೀಡಲಾಗಿಲ್ಲ. ಆದರೆ, ಪ್ರವೇಶ ಪ್ರಕ್ರಿಯೆಗಳನ್ನು ಸದ್ಯ ಮುಂದೂಡಿದ್ದು, ಯಾವುದೇ ಶಾಲೆಗಳು ಶುಲ್ಕ ಪಾವತಿಗೆ ಒತ್ತಾಯಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಆದರೆ, ಖಾಸಗಿ ಶಾಲೆಗಳ ಪ್ರವೇಶ ಶುಲ್ಕದಲ್ಲಿ ಈ ಬಾರಿ ವಿನಾಯ್ತಿ ಘೋಷಿಸಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ. ಇದಕ್ಕೆ ಆಡಳಿತ ಮಂಡಳಿಗಳು ಮಣಿಯುವುದು ಕಷ್ಟವಾಗಿದ್ದು, ಪ್ರವೇಶ ಶುಲ್ಕ ಏರಿಕೆ ಮಾಡುವುದಿಲ್ಲ ಎಂದು ಕೆಲ ಶಾಲೆಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net