‘ಛಾವಾ’ ಡಾನ್ಸ್‌ಗೆ ಕತ್ತರಿ: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾ

chaava
Published on

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಐತಿಹಾಸಿಕ ಸಿನಿಮಾ ‘ಛಾವಾ’. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ಛತ್ರಪತಿ ಸಾಂಭಾಜಿ ಮಹಾರಾಜ್‌ಆಗಿ ಹಾಗೂ ರಶ್ಮಿಕಾ ಮಂದಣ್ಣ ಸಾಂಭಾಜಿ ಮಹಾರಾಜರ ಪತ್ನಿ ಯಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ಜಾನಪದ ಶೈಲಿಯ ಲೆಜಿಮ್ ನೃತ್ಯ ಬಳಸಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲವೆಡೆ ಪ್ರತಿಭಟನೆಗಳೂ ನಡೆದವು. ‘ಮಹಾರಾಷ್ಟ್ರದ ಜಾನಪದ ಶೈಲಿ ನೃತ್ಯಗಳಲ್ಲಿ ಒಂದಾದ ಲೆಜಿಮ್ ಡಾನ್ಸ್ ಛತ್ರಪತಿ ಸಾಂಬಾಜಿ ಮಹಾರಾಜರಿಗೆ ಸರಿ ಹೊಂದುವುದಿಲ್ಲ. ಹೀಗಾಗಿ ದೃಶ್ಯವನ್ನು ತೆಗೆಯಬೇಕು. ಇಲ್ಲವಾದರೆ ಸಿನಿಮಾ ಬಿಡುಗಡೆಗೆ ಅನುಮತಿ ನೀಡುವುದಿಲ್ಲ’ ಎಂದು ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್ ಹಾಗೂ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಡ್ನವೀಸ್ ಧ್ವನಿಗೂಡಿಸಿ, ‘ರಾಷ್ಟ್ರ ನಾಯಕರ ಗೌರವಕ್ಕೆ ಧಕ್ಕೆ ತರುವುದು ಸಲ್ಲ’ ಎಂದಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಚಿತ್ರತಂಡ ‘ಛಾವಾ’ ಚಿತ್ರದ ಲೆಜಿಮ್ ಡಾನ್ಸ್ ದೃಶ್ಯಕ್ಕೆ ಕತ್ತರಿ ಹಾಕಲು ಮುಂದಾಗಿದೆ. ಸೋಮವಾರ ಮಧ್ಯಾಹ್ನ ಸಚಿವ ಉದಯ್ ಸಾಮಂತ್ ಹಾಗೂ ರಾಜ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಭೆ ಬಳಿಕ ನಿರ್ದೇಶಕ ಲಕ್ಷ್ಮಣ್ ಉಟೇಕರ್, ‘ರಾಜ್ ಠಾಕ್ರೆ ನೀಡಿರುವ ಸಲಹೆಗಳನ್ನು ಚಿತ್ರತಂಡ ಸ್ವೀಕರಿಸುತ್ತದೆ. ಇತಿಹಾಸದ ಬಗ್ಗೆ ಅವರಿಗೆ ಇರುವ ಜ್ಞಾನ ಅಪಾರ. ಚಿತ್ರದಲ್ಲಿ ಕೆಲ ಬದಲಾವಣೆಗೆ ಸಲಹೆಗಳನ್ನು ನೀಡಿದ್ದಾರೆ. ಅದರಂತೆ ನಾವು ಮುಂದುವರಿಯುತ್ತೇವೆ. ಸಾಂಭಾಜಿ ಮಹಾರಾಜರ ಲೆಜಿಮ್ ನೃತ್ಯವನ್ನು ಚಿತ್ರದಿಂದ ತೆಗೆಯುತ್ತೇವೆ. ಇದರಲ್ಲಿ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ನಮ್ಮದಾಗಿರಲಿಲ್ಲ’ ಎಂದು ಪ್ರಕರಣ ಸುಖ್ಯಾಂತಗೊಳಿಸಿದ್ದಾರೆ. ಅಂದಹಾಗೆ, ‘ಛಾವಾ’ ಇದೇ ಫೆ. 14ರಂದು ತೆರೆಗೆ ಬರಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net