ಛಲವಾದಿ ಹರಕೆ ಕುರಿ; ಎಂ.ಬಿ. ಪಾಟೀಲ್ ವ್ಯಂಗ್ಯ

mb patil
Published on

ಬೆಂಗಳೂರು: ಪಂಚಾಯತ್ ಸದಸ್ಯ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೆ ಏರಿದ ರಾಜ್ಯದ ಒಬ್ಬ ಧೀಮಂತ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಟಾರ್ಗೆಟ್ ಮಾಡಿ ಅವರ ತೇಜೋವಧೆ ಮಾಡುವುದು ಬಿಜೆಪಿ-ಆರ್‌ಎಸ್‌ಎಸ್ ಹುನ್ನಾರ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರು ಕೇವಲ ಕೈಗೊಂಬೆ. ಅವರದೇ ಇತಿಹಾಸ ಈ ರೀತಿ ಇದೆ ಎಂದು ತಿಳಿಯದೆ ಈ ಹುನ್ನಾರದಲ್ಲಿ ಭಾಗಿಯಾಗಿ ಅವರೇ ಈಗ ಹರಕೆಯ ಕುರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಲಿಂಗಾಯತರನ್ನೂ ಒಳಗೊಂಡಂತೆ ಹಿಂದುಳಿದವರನ್ನು ಬಳಸಿ ಬಿಸಾಡುವ ಬಿಜೆಪಿಯವರ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ. ಒಬ್ಬ ಹಿಂದುಳಿದ ಸಮುದಾಯದ ನಾಯಕನ ಏಳಿಗೆ ಸಹಿಸದೆ ಅವರದ್ದೇ ಸಮುದಾಯವರನ್ನು ಬಳಸಿಕೊಂಡು ತೇಜೋವಧೆ ಮಾಡಿಸುವ ಮೂಲಕ, ಸಮುದಾಯದ ನಾಯಕರಲ್ಲಿ ವೈಷಮ್ಯ ಮೂಡಿಸುವುದೇ ಇವರ ಅಜೆಂಡಾ ಎಂದು ಕುಟುಕಿದ್ದಾರೆ.
ಖರ್ಗೆಯವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಹಾಗೂ ಛಲವಾದಿ ನಾರಾಯಣಸ್ವಾಮಿಯವರನ್ನು ಹರಕೆಯ ಕುರಿ ಮಾಡಿದ್ದಕ್ಕೆ ಬಿಜೆಪಿ-ಆರ್‌ಎಸ್‌ಎಸ್ ಬಹಿರಂಗವಾಗಿ ಪರಿಶಿಷ್ಟ ಜಾತಿ ಸಮುದಾಯದವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net