

*ಗವಿರಂಗಸ್ವಾಮಿ ಬೆಟ್ಟದಲ್ಲಿದೆ ಗಂಗರ ಕಾಲದ ಐತಿಹಾಸಿಕ ಕುರುಹು
* ಪ್ರಾಕೃತಿಕ ಸೊಬಗಿಗೆ ಹೆಸರುವಾಸಿಯಾದ ಗ್ರಾಮ
ಅಭಿಲಾಷ್ ತಿಟ್ಟಮಾರನಹಳ್ಳಿ, ಚನ್ನಪಟ್ಟಣ
ನಾಥ ಹಾಗೂ ಸಿದ್ಧ ಪರಂಪರೆಯುಳ್ಳ ತಾಲೂಕಿನ ಅಪರೂಪದ ಗ್ರಾಮ ಹನಿಯೂರು. ಅಪಾರವಾದ ಪ್ರಾಕೃತಿಕ ಸೊಬಗಿನ ಜತೆಗೆ ತನ್ನ ಒಡಲಾಳದಲ್ಲಿ ಹಲವಾರು ಐತಿಹ್ಯ ಬಚ್ಚಿಟ್ಟುಕೊಂಡಿರುವುದು ಈ ಗ್ರಾಮದ ವಿಶೇಷ.
ಚನ್ನಪಟ್ಟಣ ತಾಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಹನಿಯೂರು ಬಹಳ ವಿಶಿಷ್ಟವಾದ ಗ್ರಾಮ. ತಾಲೂಕಿನಲ್ಲಿಯೇ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಇದಾಗಿದ್ದು, ಹನಿಯೂರನ್ನು ಚನ್ನಪಟ್ಟಣ ತಾಲೂಕಿನ ಚಿರಾಪುಂಜಿ ಎಂದೂ ಕರೆಯುತ್ತಾರೆ. ಎಲ್ಲೂ ಮಳೆ ಇಲ್ಲದ ಕಾಲದಲ್ಲಿಯೂ ಇಲ್ಲಿ ಸಣ್ಣ ಹನಿಯಾದರೂ ಬೀಳುತ್ತಿತ್ತಂತೆ. ಹನಿಬೀಳುವ ಊರಾದ ಕಾರಣ ಗ್ರಾಮಕ್ಕೆ ಹನಿಯೂರು ಎಂಬ ಹೆಸರು ಬಂತು ಎಂಬುದು ಇಲ್ಲಿನ ಹಿರಿಯರ ಮಾತು.
ಗವಿರಂಗಸ್ವಾಮಿ ನೆಲೆವೀಡು: ಹನಿಯೂರು ಹಾಗೂ ಸಿಂಗರಾಜಪುರ ಗ್ರಾಮಗಳ ನಡುವಿನ ಬೆಟ್ಟದಲ್ಲಿ ಶ್ರೀದೇವಿ, ಭೂದೇವಿ ಸಮೇತ ಗವಿರಂಗಸ್ವಾಮಿ ಹಾಗೂ ‘ಭೈರವಸ್ವಾಮಿ ನೆಲೆಸಿದ್ದಾರೆ. ನಾಥ ಹಾಗೂ ವೈಷ್ಣವ ಪರಂಪರೆಯ ಸಮ್ಮಿಶ್ರಣವಿರುವುದು ಈ ಕ್ಷೇತ್ರದ ವಿಶೇಷ. ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಕೇವಲ ತಾಲೂಕು ಅಲ್ಲದೆ ಹೊರ ಜಿಲ್ಲೆಗಳಲ್ಲೂ ಅಪಾರ ಭಕ್ತರನ್ನು ಹೊಂದಿದೆ.
ಗಂಗರ ಕಾಲದಲ್ಲಿ ನಿರ್ಮಾಣವಾಗಿರುವ ಮಂಟಪಗಳು ಸೇರಿ ಹಲವು ಐತಿಹಾಸಿಕ ಕುರುಹುಗಳು ಈ ಬೆಟ್ಟದ ಮೇಲಿವೆ. ಬೆಟ್ಟದ ಮೇಲ್ಭಾಗದಲ್ಲಿ ವಿಸ್ತಾರವಾದ ಜಾಗವಿದ್ದು, ದೇವರ ದರ್ಶನದ ಜತೆಗೆ, ಪ್ರಾಕೃತಿಕ ಸೊಬಗನ್ನು ಸವಿಯುವ ಅವಕಾಶ ಇಲ್ಲಿದೆ. ಇದು ತಾಲೂಕಿನ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಎಂಬ ಹೆಸರನ್ನು ತನ್ನದಾಗಿಸಿಕೊಂಡಿದೆ.
ಗಂಗರು, ಚೋಳರು ಸೇರಿ ಹಲವು ರಾಜಮನೆತನಗಳ ಆಳ್ವಿಕೆಯ ಕುರುಹುಗಳನ್ನು ಗ್ರಾಮದಲ್ಲಿ ಕಾಣಬಹುದಾಗಿದೆ. ಬೆಟ್ಟದ ತಪ್ಪಲಿನಲ್ಲಿ ಶಿಲಾಯುಗದ ಕುರುಹುಗಳೂ ಇವೆ. ಇಲ್ಲಿನ ಗವಿರಂಗಸ್ವಾಮಿ ಬೆಟ್ಟ ಶೈವ ಮತ್ತು ವೈಷ್ಣವ ಪರಂಪರೆಯ ತಾಣ ಎನ್ನಬಹುದು.
ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯಷ್ಟೇ ಅಲ್ಲದೆ ಈ ಗ್ರಾಮ ಕಲಾವಿದರ ಹುಟ್ಟೂರು ಎಂಬುದು ಬಹಳ ವಿಶೇಷ. ಈ ಹಿಂದೆ ಗ್ರಾಮದಲ್ಲಿ ಹಲವು ಕಲಾ ಪ್ರಕಾರ ಮೈಗೂಡಿಸಿಕೊಂಡಿದ್ದ ಹಲವು ಕಲಾವಿದರಿದ್ದರು. ಕೋಲಾಟ, ಹುಲಿಯಾಟ ಹಾಗೂ ಕರಡಿಯಾಟದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಕೀರ್ತಿ ಈ ಗ್ರಾಮದ ಕಲಾವಿದರಿಗಿದೆ. ಅಷ್ಟೇ ಅಲ್ಲದೆ ರಂಗಭೂಮಿಯ ನಂಟು ಸಹ ಈ ಗ್ರಾಮಕ್ಕಿದೆ. ಒಂದರ ಹಿಂದೆ ಮತ್ತೊಂದು ಎಂಬಂತೆ ಈ ಗ್ರಾಮದಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತಿದ್ದು, ಇದಕ್ಕೆ ಸಾಕ್ಷಿ ಎನ್ನಬಹುದು. ಕೋಲಾಟ, ಕರಡಿಯಾಟ ಪ್ರದರ್ಶನವನ್ನು ಗ್ರಾಮದ ಕಲಾವಿದರು ಹಲವೆಡೆ ಮಾಡುತ್ತಿದ್ದರು. ಆದರೆ, ಪ್ರಸುತ್ತ ಈ ಕಲೆಗಳು ಕಣ್ಮರೆಯಾಗುತ್ತಿರುವುದು ಮಾತ್ರ ದುರಂತ.
ಹನಿಯೂರು ಹಾಗೂ ರಾಮೇಗೌಡನದೊಡ್ಡಿ ಎರಡೂ ಒಂದೇ ದಾಖಲೆ ಗ್ರಾಮಗಳಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಒಕ್ಕಲಿಗ, ದಲಿತ, ಕುರುಬ ಸೇರಿ ವಿವಿಧ ಜಾತಿಜನಾಂಗಗಳು ಗ್ರಾಮದಲ್ಲಿವೆ. ಮಾರಮ್ಮ, ಶನೇಶ್ಚರ, ಲಕ್ಷ್ಮೀದೇವಮ್ಮ ಮುನೇಶ್ಚರ, ಕಬ್ಬಾಳಮ್ಮ ಸೇರಿ ಹಲವು ದೇವಾಲಯಗಳಿವೆ. 5 ವರ್ಷಕೊಮ್ಮೆ ಮಾರಮ್ಮನ ಉತ್ಸವವನ್ನು ಬಹಳ ಅದ್ದೂರಿಯಾಗಿ ನಡೆಸಲಾಗುತ್ತದೆ. ಪ್ರತಿವರ್ಷ ಅಷ್ಟಮಿ ಮೆರವಣಿಗೆ ಗ್ರಾಮದಲ್ಲಿ ನಡೆಯುತ್ತದೆ. ಸೈನ್ಯ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ವಕೀಲರು ಸೇರಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಗ್ರಾಮದ ಹಲವರು ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಯುವಕರು ಬೆಂಗಳೂರು ಮಹಾನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಗ್ರಾಮದಲ್ಲಿ ಮಹಾಸತಿ ಕಲ್ಲುಗಳು ಹಾಗೂ ವೀರಗಲ್ಲುಗಳಿವೆ. ಶೃಂಗ ಮಹರ್ಷಿಗಳು ನೆಲೆಸಿದ ತಾಣವಾಗಿದ್ದು, ಗ್ರಾಮದಲ್ಲಿ ಸಿದ್ಧರಗವಿ (ರಸಸಿದ್ದೇಶ್ವರ ಖುಷಿಮುನಿಗಳು) ಇದೆ. ಈ ಜಾಗಕ್ಕೆ ಹೆಣ್ಣುಮಕ್ಕಳು ಹೋಗುವಂತಿಲ್ಲ. ವರ್ಷಕೊಮ್ಮೆ ಗ್ರಾಮಸ್ಥರು ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಗೌರಿಗಣೇಶ ಹಬ್ಬ ಮುಗಿದ ಬಳಿಕ ಇಲ್ಲಿಗೆ ಹೋಗುವುದು ಗ್ರಾಮದ ವಾಡಿಕೆ.