

ಚೆನ್ನೈ: ಕುಂಭದ್ರೋಣ ಮಳೆ ಸುರಿದ ಕಾರಣ ಚೆನ್ನೈ ತತ್ತರಿಸಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆ 8.30ರವರೆಗೆ 21 ಸೆಂಟಿ ಮೀಟರ್ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವು ಬಡಾವಣೆಗಳಲ್ಲಿ ಮನೆಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ನೀರು ನದಿಯಂತೆ ಹರಿದ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ, ವಿಮಾನ ಸಂಚಾರಕ್ಕೆ ಅಡಚಣೆ ಆಗಿಲ್ಲ.
ಅಪಾರ್ಟ್ವೆುಂಟ್ಗಳ ಬೇಸ್ವೆುಂಟ್ನಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತು, ಕಾರುಗಳು ಮುಳುಗಿವೆ. ಕೆ.ಕೆ.ನಗರದಲ್ಲಿ ಮಂಡಿಮಟ್ಟ ನೀರು ನಿಂತಿದೆ. ಮಳೆ ನೀರಿನೊಂದಿಗೆ ಒಳಚಂರಡಿ ನೀರು ಸೇರಿ ಗಬ್ಬು ನಾರುತ್ತಿದೆ. ಈ ನೀರಿನ ಸಂಪರ್ಕಕ್ಕೆ ಬಂದವರಿಗೆ ಅಲರ್ಜಿ ಆಗಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಅಣ್ಣಾ ನಗರದ ಬಹುತೇಕ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದ್ದು, ವಾಹನಗಳು ಭಾಗಶಃ ಮುಳುಗಿವೆ. ಎಗ್ಮೋರ್, ಪಾಡಿ ಬ್ರಿಡ್ಜ್, ಜವಾಹರ್ ನಗರ್ಗಳಲ್ಲಿ ಪ್ರವಾಹ ಇದೆ. ಚೆನ್ನೈ ಸಮೀಪದ ಎಲ್ಲ ಕೆರೆಗಳು ತುಂಬಿ ಕೋಡಿ ಬದ್ದಿವೆ. ಚೆಂಬರಾಂಬಕ್ಕಂ ಕೆರೆಯಲ್ಲಿ 82.35 ಅಡಿ (ಗರಿಷ್ಠ ಮಟ್ಟ 85.4 ಅಡಿ) ನೀರು ಭರ್ತಿಯಾಗಿದೆ. ಅಡ್ಯಾರ್ ನದಿ ದಂಡೆಯಲ್ಲಿರುವ ಕಾಂಚಿಪುರಂ, ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆನ್ನೈನ ತಗ್ಗು ಪ್ರದೇಶ, ತಿರುವಳ್ಳೂರ್, ಚೆಂಗಲ್ಪಟ್ಟು, ಮದುರೈ, ಅರಕೋಣಂ ಜಿಲ್ಲೆಗಳಿಗೆ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ರಾಣಿಪೇಟ್, ವೆಲ್ಲೂರು, ತಿರುಪತ್ತೂರು, ಕೃಷ್ಣಗಿರಿ, ವೆಲ್ಲುಪುರಂ, ಕಡಲೂರು, ನೀಲಗಿರಿ, ಸೇಲಂ, ಈರೋಡ್, ನಾಮಕ್ಕಲ್, ಕಲ್ಲಕುರುಚಿ, ತಿರುವಣ್ಣಾಮಲೈ, ತಿರುಚಿ, ತಿರುವಳ್ಳೂರು, ಕಾಂಚಿಪುರಂ ಚೆಂಗಲ್ಪುಟ್ಟು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. 2015ರ ನವೆಂಬರ್ 16ರಂದು ಚೆನ್ನೈನಲ್ಲಿ ಇದೇ ರೀತಿ ಮಳೆ ಸುರಿದು ಪ್ರವಾಹ ಉಂಟಾಗಿತ್ತು. 24 ಸೆಂಟಿಮೀಟರ್ ಮಳೆ ಸುರಿದಿತ್ತು.
120 ವರ್ಷದಲ್ಲೇ ಅಧಿಕ ಮಳೆ: ಕಳೆದ 120 ವರ್ಷಗಳಲ್ಲಿ ಅಕ್ಟೋಬರ್ನಲ್ಲಿ ಬಿದ್ದ ಮಳೆಯ ಸರಾಸರಿಯನ್ನು ಅವಲೋಕಿಸಿದರೆ 2021ರ ಅಕ್ಟೋಬರ್ನಲ್ಲಿ ಸುರಿದ ಮಳೆ ಅತ್ಯಧಿಕವಾಗಿದೆ. ಕಳೆದ ತಿಂಗಳು ಕೇರಳದಲ್ಲಿ 589.9 ಮಿಲಿ ಮೀಟರ್ ಮಳೆಯಾಗಿದೆ. 1901ರ ನಂತರ ಇಷ್ಟು ಭಾರಿ ಪ್ರಮಾಣದ ಮಳೆಯನ್ನು ಕೇರಳ ಕಂಡಿದೆ ಎಂದು ಐಎಂಡಿ ಹೇಳಿದೆ. 1932ರಲ್ಲಿ 524.2 ಎಂ.ಎಂ. ಮತ್ತು 1999ರಲ್ಲಿ 567.9 ಎಂ.ಎಂ. ಹಾಗೂ 2002ರಲ್ಲಿ 511.7 ಎಂ.ಎಂ. ಮಳೆ ಕೇರಳದಲ್ಲಿ ಆಗಿತ್ತು. 1989ರಲ್ಲಿ 100 ಎಂ.ಎಂ. ಮಳೆ ಆಗಿದ್ದು, 120 ವರ್ಷದಲ್ಲಿ ಕಡಿಮೆ ದಾಖಲೆ ಆಗಿದೆ. ಈ ಹನ್ನೆರಡು ದಶಕದಲ್ಲಿ ಸರಾಸರಿ 200ರಿಂದ 400 ಎಂ.ಎಂ. ಮಳೆ ಆಗಿದೆ ಎಂದು ತಿಳಿಸಿದೆ.